ಉಡುಪಿ: ಅಸ್ವಸ್ಥ ಸ್ಥಿತಿಯಲ್ಲಿ ರೈಲ್ವೆ ಹಳಿ ಬಳಿಯಿದ್ದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ರಕ್ಷಣೆ
ಉಡುಪಿ ಸೆ.3: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಸಮೀಪದ ಅಚ್ಚಡ ರೈಲ್ವೆ ಹಳಿಗಳ ಬಳಿ ವಿವಸ್ತ್ರವಾಗಿದ್ದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಒಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಕಾಪು ಪೋಲಿಸರ ನೆರವಿನೊಂದಿಗೆ ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ರಕ್ಷಿಸಲಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಶೇಖರ್ ಠಾಕೂರು (67) ಎಂದು ಗುರುತಿಸಲಾಗಿದೆ. ಇವರು ವಿವಸ್ತ್ರವಾಗಿ ರೈಲ್ವೆ ಹಳಿ ಬಳಿ ನಡೆದಾಡಲಾಗದೆ ದಣಿದಿದ್ದು, ಮೇಲ್ನೋಟಕ್ಕೆ ಇವರು ಮರೆವು ಖಾಯಿಲೆ ಅಥವಾ ಖಿನ್ನತೆಗೊಳಗಾದಂತೆ ತೋರುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ವಿಶು ಶೆಟ್ಟಿ ಪೊಲೀಸರ ಸಹಾಯದಿಂದ ಅವರನ್ನು ರಕ್ಷಿಸಿದ್ದಾರೆ. ಬಳಿಕ ವ್ಯಕ್ತಿಯ ಬಳಿ ಇದ್ದ ಗುರುತು ಚೀಟಿ ಪರಿಶೀಲಿಸಿದಾಗ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ನಿವೃತ್ತರಾಗಿರುವುದು ತಿಳಿದುಬಂದಿದೆ.
ಅವರಲ್ಲಿದ್ದ ಬ್ಯಾಗ್ ನಲ್ಲಿ 42,000 ರೂ. ನಗದು, ಪ್ಯಾಂಟ್ ಶರ್ಟ್ ಗುರುತು ಚೀಟಿಗಳು ದೊರೆತಿವೆ. ಮಾಹಿತಿ ಇರುವ ಅಥವಾ ಸಂಬಂಧಿಕರು ಕಾಪು ಠಾಣೆ ಅಥವಾ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.