ಉಡುಪಿ ಜಿಲ್ಲೆಯಲ್ಲಿ 50-60 ಕೋಟಿ ರೂ. ಅನ್‌ಕ್ಲೈಮ್ಡ್ ಠೇವಣಿ: ಉಡುಪಿ ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ಹರೀಶ್

Update: 2026-08-04 19:34 IST

ಉಡುಪಿ, ಆ.4: ಎರಡು ವರ್ಷಗಳಿಂದ ಸಕ್ರಿಯವಾಗಿರದ ಬ್ಯಾಂಕ್ ಖಾತೆಗಳು ನಿಷ್ಕ್ರೀಯಗೊಂಡು, ಡೆಬಿಟ್ ಬ್ಲಾಕ್ ಆಗುತ್ತದೆ. ಹಾಗೆ 10ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಆ ಖಾತೆಯಿಂದ ಯಾವುದೇ ವ್ಯವಹಾರ ಮಾಡದಿದ್ದರೆ ಅದರಲ್ಲಿನ ಹಣ ಭಾರತೀಯ ರಿಸರ್ವ್ ಬ್ಯಾಂಕಿನ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ(ಡಿಇಎ)ಗೆ ವರ್ಗಾವಣೆ ಗೊಳ್ಳುತ್ತದೆ. ಈ ರೀತಿ ಉಡುಪಿ ಜಿಲ್ಲೆಯಲ್ಲಿ ಕ್ಲೈಮ್ ಆಗದೆ ಇರುವ 50-60ಕೋಟಿ ರೂ. ಠೇವಣಿ ಹಣ ಡಿಇಎ ನಿಧಿಯಲ್ಲಿದೆ ಎಂದು ಉಡುಪಿ ಕೆನರಾ ಲೀಡ್ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗ ದೊಂದಿಗೆ ಪ್ರತಿಕಾ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಸನ್ಮತಿ ಪತ್ರಿಕೆಯ ಜುಲೈ ತಿಂಗಳ ಸಂಚಿಕೆ ಬಿಡುಗಡೆ ಹಾಗೂ ಪತ್ರಕರ್ತರಿಗೆ ಪಿಎಂಎಸ್‌ಬಿವೈ (ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನಾ) ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಅನ್‌ಕ್ಲೇಮ್ಡ್ ಹಣವನ್ನು ಖಾತೆದಾರರ ವಾರೀಸುದಾರರು ಅಥವಾ ಕುಟುಂಬದವರು ಅಗತ್ಯ ದಾಖಲೆ ನೀಡಿ, ಹಣವನ್ನು ವಾಪಾಸ್ಸು ಪಡೆದು ಕೊಳ್ಳಬಹುದಾಗಿದೆ. ಈ ರೀತಿಯ ಖಾತೆಗಳ ಮಾಹಿತಿಯನ್ನು ಎಲ್ಲ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಯನ್ನು ನೀಡಿ ಅವರ ವಾರೀಸುದಾರರು ಆ ಹಣವನ್ನು ವಾಪಾಸ್ಸು ಪಡೆಯ ಬಹುದಾಗಿದೆ ಎಂದರು.

ಆಹಾರ ಸಂಸ್ಕರಣೆ ಉದ್ಯಮಕ್ಕಾಗಿ ಯೋಜನೆ ಇದ್ದು, ಇದರಲ್ಲಿ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 500-600 ಘಟಕಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ. ಮುದ್ರಾ ಯೋಜನೆಯಲ್ಲಿ 10ಲಕ್ಷ ರೂ. ಒಳಗೆ ಸಾಲ ಪಡೆದುಕೊಂಡರೆ ಮತ್ತು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ 7.5ಲಕ್ಷ ರೂ.ವರೆಗಿನ ವಿದ್ಯಾಭ್ಯಾಸ ಸಾಲದಲ್ಲಿಯೂ ಯಾವುದೇ ಅಡಮಾನ ಇರಿಸುವ ಅಗತ್ಯ ಇಲ್ಲ ಎಂದರು.

ಎಟಿಎಂ ಕಾರ್ಡ್ ಹೊಂದಿದವರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಅವಕಾಶ ಇದೆ. ಮುದ್ರಾ ಸೇರಿದಂತೆ ವಿವಿಧ ಉದ್ಯಮಶೀಲತೆ ಯೋಜನೆಯಲ್ಲಿ ಪ್ರತಿ ವರ್ಷ ಉಡುಪಿ ಜಿಲ್ಲೆಯಿಂದ 3000ಕೋಟಿ ರೂ. ಸಾಲದ ಗುರಿಯನ್ನು ಎಲ್ಲ ಬ್ಯಾಂಕ್‌ಗಳಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಸಾಲ ಮರು ವಸೂಲಾತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಅಧಿಕಾರಿಗಳು ಪ್ರತಿ ದಿನ 2ಗಂಟೆ ಮೀಸಲಿರಿಸಬೇಕು. ಹೀಗೆ ಜಿಲ್ಲೆಯಲ್ಲಿ ಶೇ.25ರಷ್ಟು ಸಾಲ ಮರು ವಸೂಲಾತಿ ಆಗುತ್ತಿದೆ. ಶಿಕ್ಷಣ ಸಾಲ ಮತ್ತು 2ಲಕ್ಷ ರೂ.ಗಿಂತ ಕಡಿಮೆ ಸಾಲಕ್ಕೆ ಬ್ಯಾಂಕುಗಳು ಸಿಬಿಲ್ ನೋಡುವುದಿಲ್ಲ ಎಂದು ಅವರು ಹೇಳಿದರು.

ಅಲ್ಲದೆ ಇವರು ಬ್ಯಾಂಕುಗಳಲ್ಲಿ ಸಿಗುವ ಕೃಷಿ ಸಾಲ, ಶಿಕ್ಷಣ ಸಾಲ ಸಹಿತ ವಿವಿಧ ಸಾಲಗಳು, ಠೇವಣಿ ಯೋಜನೆ ಗಳು ಹಾಗೂ ಜೀವ- ಆರೋಗ್ಯ-ಅಪಘಾತ ವಿಮೆ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಮಾಲೋಚಕಿ ಮೀರಾ ಹಾಜರಿದ್ದರು.

ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಕೋಶಾಧಿಕಾರಿ ಹರೀಶ್ ಕುಂದರ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಂಕಿತ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ಸಾಲ ನೀಡುವುದರಲ್ಲಿ ಉಡುಪಿ ಜಿಲ್ಲೆ 8 ಸ್ಥಾನ

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅನಿವಾಸಿ ಭಾರತೀಯ ಠೇವಣಿ ಹೆಚ್ಚಿರುವುದರಿಂದ ನಮ್ಮ ಜಿಲ್ಲೆಗಳಲ್ಲಿ ಕ್ರೇಡಿಟ್-ಠೇವಣಿ(ಸಿಡಿ) ಅನುಪಾತ ಶೇ.50ಕ್ಕಿಂತ ಕಡಿಮೆ ಅಂದರೆ ಶೇ.40ರಷ್ಟಿದೆ. ಒಟ್ಟು ಸಾಲ ನೀಡಿರುವುದರಲ್ಲಿ ಉಡುಪಿ ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ. ಸುಮಾರು 20ಸಾವಿರ ಕೋಟಿಯಷ್ಟು ಸಾಲವನ್ನು ನಾವು ವಿತರಣೆ ಮಾಡಿದ್ದೇವೆ ಎಂದು ಮುಖ್ಯ ಪ್ರಬಂಧಕ ಹರೀಶ್ ಮಾಹಿತಿ ನೀಡಿದರು.

ಈ ಹಿಂದೆ ಬ್ಯಾಂಕ್‌ಗಳಲ್ಲಿ ಪ್ರಾದೇಶಿಕವಾಗಿ ನೇಮಕಾತಿ ಮಾಡಲಾಗು ತ್ತಿತ್ತು. ಈಗ ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವುದರಿಂದ ಹೊರ ರಾಜ್ಯದ ಅಧಿಕಾರಿಗಳೇ ಹೆಚ್ಚು ನೇಮಕಾತಿಯಾಗುತ್ತಿದ್ದಾರೆ. ಕರ್ನಾಟಕದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಬ್ಯಾಂಕಿನಲ್ಲಿ ವ್ಯವಹರಿಸಲು ಭಾಷಾ ಸಮಸ್ಯೆ ಆಗುತ್ತಿದೆ. ಆದುದರಿಂದ ಮತ್ತೆ ಪ್ರಾದೇಶಿಕವಾಗಿ ನೇಮಕಾತಿ ಮಾಡಲು ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನವನ್ನು ನೀಡಲಾಗುತ್ತಿದೆ. ಅದರಂತೆ ಹಲವು ಬ್ಯಾಂಕ್‌ಗಳು ಮಾಡುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News