ಜಾನಪದ ವಿದ್ವಾಂಸ ಕನರಾಡಿ ವಾದಿರಾಜ ಭಟ್‌ಗೆ ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ-2026
ಉಡುಪಿ, ಆ.4: ಸಾಹಿತ್ಯ, ಸಾಂಸ್ಕೃತಿಕ ರಂಗದ ಹತ್ತು ಹಲವು ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ.ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ-2026ಕ್ಕೆ ಪ್ರಸಿದ್ಧ ಜಾನಪದ ವಿದ್ವಾಂಸ, ಸಂಶೋಧಕ ಹಾಗೂ ಲೇಖಕರಾದ ಕನರಾಡಿ ವಾದಿರಾಜ ಭಟ್ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 20,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳ ಗೊಂಡಿದೆ. ಕಾರ್ಯಕ್ರಮ ಸದ್ಯವೇ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಕನರಾಡಿ ವಾದಿರಾಜ ಭಟ್ ಅವರು ಕರಾವಳಿಯ ಪ್ರಸಿದ್ಧ ಜಾನಪದ ವಿದ್ವಾಂಸರು, ಸಂಶೋಧಕರು ಹಾಗೂ ಕನ್ನಡ-ತುಳು ಸಾಹಿತ್ಯದ ಹಿರಿಯ ಚಿಂತಕರಾಗಿದ್ದಾರೆ. 1951ರಲ್ಲಿ ಉಡುಪಿ ಸಮೀಪದ ಮಣಿಪುರ ಗ್ರಾಮದ ಕನರಾಡಿಯಲ್ಲಿ ಜನಿಸಿದ ಇವರು, ಶಿಕ್ಷಣದ ಜೊತೆಗೆ ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿ, ಕರಾವಳಿಯ ಸಾಂಸ್ಕತಿಕ ಪರಂಪರೆಯ ಅಧ್ಯಯನ ಮತ್ತುದಾಖಲಾತಿಗೆ ಮಹತ್ವದಕೊಡುಗೆ ನೀಡಿದ್ದಾರೆ.
ಕನ್ನಡ ಮತ್ತು ತುಳು ಜಾನಪದ ಸಾಹಿತ್ಯದ ಸಂಶೋಧನೆ, ಸಂಗ್ರಹ ಹಾಗೂ ಪ್ರಕಟಣೆಯಲ್ಲಿ ಡಾ. ಕನರಾಡಿ ವಾದಿ ರಾಜ ಭಟ್ ಅವರದು ವಿಶಿಷ್ಟ ಸೇವೆ. ‘ಪಾಡ್ದನಗಳು’, ‘ಜೋಕ್ಲೆ ಪದೋಕ್ಲು’, ‘ತುಳುಜನಪದ ಕತೆಗಳು’, ‘ಮೂಕಜ್ಜಿ’, ‘ಮಗೆ ಬರೆವು ಕಲ್ತೆ, ಮೂಕಾಂಬಿಕಾ ಕ್ಷೇತ್ರ ಕೊಲ್ಲೂರು ಮುಂತಾದುವು ಇವರ ಪ್ರಕಟಣೆಗಳು. ‘ಯಕ್ಷದೀಪಿಕ’, ’ಹಸನ್ಮುಖಿ’, ‘ಅಜ್ಜಿ ಸಾಕಿದ ಮಗ’, ‘ಬನದ ಸಿರಿ’, ’ಕರ್ನಾಟಕದರ್ಶನ’, ’ಅಮೃತ ಪುರುಷ’ ಇವರ ಸಂಪಾದಿತ ಕೃತಿಗಳು. ಸುಮಾರು 150ಕ್ಕೂ ಹೆಚ್ಚು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಡಾ.ವಾದಿರಾಜ ಭಟ್‌ರ ‘ಬಸ್ರೂರು ಅಧ್ಯಯನ’ ಗ್ರಂಥ ಮಂಗಳೂರು ವಿವಿ ಪ್ರಾದೇಶಿಕ ಅಧ್ಯಯನ ವಿಷಯಕ್ಕೆ ಪಠ್ಯ ವಾಗಿದೆ. ಕನ್ನಡ ಜನಪದ ನಿಘಂಟುಗೆ ಉಡುಪಿ ಜಿಲ್ಲೆಯ ಜಾನಪದ ತಜ್ಞರಾಗಿ ಇವರು ಆಯ್ಕೆಯಾಗಿದ್ದರು. ಡಾ.ಕನರಾಡಿ ಸಾಹಿತ್ಯ-ಸಾಂಸ್ಕತಿಕ ಸೇವೆಯನ್ನು ಗೌರವಿಸಿ ಜೇಸೀ ಪ್ರಶಸ್ತಿ, ಭಾರತ ಭೂಷಣ ಪ್ರಶಸ್ತಿ, ಕನ್ನಡರತ್ನ ರಾಜ್ಯ ಪ್ರಶಸ್ತಿ, ಕಾರಂತ ಸದ್ಭಾವನಾ ಪ್ರಶಸ್ತಿ, ತುಳು ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಲೋಕ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿದೆ.