×
Ad

ಜೂ.10: ಕೊಲ್ಲೂರಿನಲ್ಲಿ ‘ವರಾಹ ಮಿಹಿರನ್’ ಕಥಕ್ಕಳಿ ಪ್ರದರ್ಶನ

Update: 2026-06-02 18:49 IST

ಉಡುಪಿ, ಜೂ.2: ಕೇರಳ ಪಾಲಕ್ಕಾಡ್ ಚೇತಲ್ಲೂರಿನ ಜ್ಯೋತಿಷ ಕಲಾಲಯಂ ವತಿಯಿಂದ ಭಾರತದ ಖ್ಯಾತ ಖಗೋಳಶಾಸ್ತ್ರಜ್ಞ ಮತ್ತು ಜ್ಯೋತಿಷಿ ವರಾಹ ಮಿಹಿರನ್ ಅವರ ಜೀವನವನ್ನು ಚಿತ್ರಿಸುವ, ಕೇರಳದಲ್ಲಿ ಜನ ಮೆಚ್ಚುಗೆ ಪಡೆದ ‘ವರಾಹ ಮಿಹಿರನ್’ ಕಥಕ್ಕಳಿ ಕಾರ್ಯಕ್ರಮ ಇದೇ ಜೂ.10ರಂದು ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದ ಆವರಣ ದಲ್ಲಿರುವ ಸ್ವರ್ಣಮುಖಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜ್ಯೋತಿಷ ಕಲಾಲಯಂನ ಅಧ್ಯಕ್ಷ ಚೇತಲ್ಲೂರ್ ವಿಜಯ ಕುಮಾರ್ ಗುಪ್ತನ್ ಈ ಕುರಿತು ಮಾಹಿತಿ ನೀಡಿದರು. ಪ್ರದರ್ಶನ ಅಂದು ಅಪರಾಹ್ನ 3 ಗಂಟೆಗೆ ಪ್ರಾರಂಭಗೊಂಡು ಸಂಜೆ 6:00ಕ್ಕೆ ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಕೇರಳದ ಪ್ರಸಿದ್ಧ ಕಥಕ್ಕಳಿ ಕಲಾವಿದರು ಇದರಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ನಾಟಕದ ಚಿತ್ರಕಥೆಯನ್ನು ವಾಮನನ್ ನಂಬೂದಿರಿ ಬರೆದಿದ್ದು, ಕಲಾಮಂಡಲಂ ಕೇಶವನ್ ನಂಬೂದಿರಿ ನಿರ್ದೇಶಿಸಿದ್ದಾರೆ. ‘ವರಾಹ ಮಿಹಿರನ್’ ಕಥಕ್ಕಳಿಯ ಮೂಲ ನಿರೂಪಣೆ ಉಜ್ಜಯಿನಿಯ ರಾಜ್ಯಾ ವಿಕ್ರಮಾದ್ಯಿತರ ಆಸ್ಥಾನದಲ್ಲಿದ್ದ ಆಚಾರ್ಯ ವರಾಹಮಿಹಿರರು ಮಾಡಿದ ಅಸಾಧಾರಣ ಮತ್ತು ವಿಸ್ಮಯಕಾರಿ ಜ್ಯೋತಿಷ್ಯ ಭವಿಷ್ಯವಾಣಿಯ ಸುತ್ತ ಸಾಗುತ್ತದೆ. ಕೇರಳದಲ್ಲಿ ಈಗಾಗಲೇ ಇದರ ಆರು ಪ್ರದರ್ಶನಗಳು ಅಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ನಡೆದಿದೆ ಎಂದು ವಿಜಯಕುಮಾರ್ ಗುಪ್ತನ್ ತಿಳಿಸಿದರು.

ಈ ಪ್ರದರ್ಶನದ ಸಮಗ್ರ ಪರಿಕಲ್ಪನೆ, ನಿರ್ಮಾಣ ವಿನ್ಯಾಸ ಮತ್ತು ನಿರೂಪಣಾ ಸಂಕಲನವನ್ನು ವಿಜಯಕುಮಾರ್ ಗುಪ್ತನ್ ಮಾಡಿದ್ದಾರೆ. ಇದರಲ್ಲಿ ಕಲಾಮಂಡಲಂ ಕೇಶವನ್ ನಂಬೂದಿರಿ ಅವರು ವರಾಹಮಿಹಿರ ಆಗಿ, ಸದಾನಮ್ ಮಣಿಕಂಠನ್ ರಾಜಾ ವಿಕ್ರಮಾದಿತ್ಯನಾಗಿ, ಸದಾನಮ್ ಸದಾನಂದಮ್ ರಾಣಿ ಲೀಲಾವತಿಯಾಗಿ ಹಾಗೂ ಕಲಾಮಂಡಲಂ ಶಿವದಾಸನ್ ಮಂತ್ರಿ ಭಟ್ಟಿಯಾಗಿ ಅಭಿನಯಿಸಿದ್ದಾರೆ ಎಂದು ಅವರು ವಿವರಿಸಿದರು.

ಈ ಸಾಂಸ್ಕೃತಿಕ ಪ್ರದರ್ಶನಕ್ಕೆ ಮೊದಲು ಶಾಸ್ತ್ರೀಯ ಕಲೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಕೇರಳದ ಗಣ್ಯ ಕಲಾವಿದರು ಮತ್ತು ಸೃಜನಶೀಲ ತಂಡದ ಸದಸ್ಯರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸ ಲಾಗುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಜಯಕೃಷ್ಣನ್ ವಾರಿಯರ್, ರಾಜ್ಯ ಕಾರ್ಯದರ್ಶಿ ತೇಜಸ್ ನಂಬೂದಿರಿ ಹಾಗೂ ಅರವಿಂದ ಕೋಟೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News