ಉಡುಪಿ, ಆ.25: ಪ್ರತಿವರ್ಷದಂತೆ ಈ ಬಾರಿಯೂ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಪ್ರವಾಸಿ ಮುಹಮ್ಮದ್(ಸ)ರ ಜನ್ಮದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ಆ.26ರಿಂದ ಸೆ.6ರವರೆಗೆ ನಡೆಯಲಿದ್ದು, ಉಡುಪಿ ಜಿಲ್ಲೆಯಲ್ಲೂ ಇದೇ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಉಡುಪಿ ನಗರ ಪ್ರದೇಶದ ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ನಿಸಾರ್ ಅಹ್ಮದ್ ಹೇಳಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪ್ರವಾದಿ ಮುಹಮ್ಮದ್(ಸ) ಸಂದೇಶಗಳನ್ನು ಕನ್ನಡದ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.

ಅಭಿಯಾನದ ಪ್ರಯುಕ್ತ ಖ್ಯಾತ ಸಾಹಿತಿ ಹಾಗೂ ಗ್ರಂಥಕತ ಯೋಗೇಶ್ ಮಾಸ್ಟರ್ ಬರೆದ ‘ಮಾನವ ಮನಸ್ಸಿನ ಕೃಷಿಕ- ಮನದೊಡೆಯಪ್ರವಾದಿ ಮುಹಮ್ಮದ್ (ಸ)’ ಹಾಗೂ ‘ವಾರ್ತಾಭಾರತಿ’ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಅವರು ‘ಸಮಗ್ರ ಕ್ರಾಂತಿಯ ಜ್ಯೋತಿ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಗೊಳಿಸಲಾಗುತ್ತದೆ ಎಂದರು.

ಅಭಿಯಾನದ ಪ್ರಯುಕ್ತ ರಾಜ್ಯಾದ್ಯಂತ ವೈಯಕ್ತಿ ಭೇಟಿ, ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಯಾಲಿಗಳು ನಡೆಯಲಿವೆ.

ಸ್ಥಳೀಯವಾಗಿ ವೈದ್ಯಕೀಯ ತಪಾಸಣಾ ಶಿಬಿರ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ಆಸ್ಪತ್ರೆಗಳಿಗೆ ಭೇಟಿ- ರೋಗಿ ಗಳಿಗೆ ಹಣ್ಣುಹಂಪಲು ವಿತರಣೆ, ವೃದ್ಧಾಶ್ರಮ- ಅನಾಥಾಲಯಗಳಿಗೆ ಭೇಟಿ, ಮಾನವ ಸರಪಳಿ ಅಲ್ಲದೇ ರೀಲ್ಸ್ ಸ್ಪರ್ಧೆಗಳು ನಡೆಯಲಿವೆ ಎಂದು ನಿಸಾರ್ ಅಹ್ಮದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಶಾನವಾಝ್, ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾಗೂ ಉಡುಪಿ ಜಾಮಿಯಾ ಮಸೀದಿ ಅಧ್ಯಕ್ಷ ರಿಯಾಝ್ ಅಹಮ್ಮದ್, ಮುಶೀರ್ ಅಹಮ್ಮದ್ ಶೇಖ್, ಫಾರೂಕ್ ಇಂದ್ರಾಳಿ ಹಾಗೂ ಫಯಾಝ್ ಅಝೀಝ್ ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor