×
Ad

ಜೂ.28ರ ಪಲ್ಸ್ ಪೋಲಿಯೊಕ್ಕೆ 63,524 ಮಕ್ಕಳ ಗುರಿ: ಉಡುಪಿ ಜಿಲ್ಲಾಧಿಕಾರಿ

Update: 2026-05-15 19:52 IST

ಉಡುಪಿ, ಮೇ 15: ಮುಂದಿನ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಜೂನ್ 28ರಂದು ನಡೆಯಲಿದ್ದು, ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ 0-5 ವರ್ಷ ಪ್ರಾಯದ ಒಟ್ಟು 63,524 ಮಕ್ಕಳಿಗೆ ಪೋಲಿಯೊ ಡ್ರಾಪ್ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಸಾಲಿನ ಡಿಸೆಂಬರ್‌ನಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 65,401 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.103ರಷ್ಟು ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದ ಅವರು, ಈ ಬಾರಿ 63,524 ಮಕ್ಕಳನ್ನು ಗುರುತಿಸಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿದೆ. ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 668 ಲಸಿಕಾ ಕೇಂದ್ರಗಳ ಜೊತೆಯಲ್ಲಿ ಟ್ರಾನ್ಸಿಟ್ 18 ಬೂತುಗಳು, 5 ಮೊಬೈಲ್ ತಂಡಗಳಿದ್ದು, 1363 ತಂಡಗಳು ಹಾಗೂ 155 ಮೇಲ್ವಿಚಾರಕ ರನ್ನು ನೇಮಿಸಲಾಗಿದೆ ಎಂದರು.

ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವು ಜೂನ್ 28 ರಂದು ನಡೆಯಲಿದ್ದು, 0-5 ವರ್ಷದೊ ಳಗಿನ ಯಾವುದೇ ಮಗು ಲಸಿಕೆ ಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಕರೆ ನೀಡಿದರು.

ದೇಶದಲ್ಲಿ 2011ರ ಜನವರಿ 13ರಂದು ಕೊನೆಯದಾಗಿ ಪೋಲಿಯೋ ಪ್ರಕರಣ ವರದಿಯಾಗಿದ್ದು, ಅನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಾಗಿ ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪೋಲಿಯೊ ಮತ್ತು ದಡಾರ ನಿರ್ಮೂಲನೆ ಮಾಡುವಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ತೋರಬಾ ರದು. ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಿ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದರು.

ಲಸಿಕಾ ದಿನದಂದು ಲಸಿಕೆ ನೀಡಲು ಗುರುತಿಸಲಾದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಸಿದ್ಧರಾಗಿರಬೇಕು. ಲಸಿಕಾ ಕಾರ್ಯಕ್ರಮ ರವಿವಾರವಾದ ಕಾರಣ, ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾ ರದ ಟೋಲ್ ಗೇಟ್‌ಗಳಲ್ಲಿ ಬೂತ್‌ಗಳನ್ನು ತೆರೆಯಲು ಅನುವು ಮಾಡಿಕೊಡಬೇಕು ಎಂದರು.

ವಲಸೆ, ಕಟ್ಟಡ ಹಾಗೂ ಇತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕೆ ಪಡೆಯು ವಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಮೆಸ್ಕಾಂ, ಸಾರಿಗೆ, ರೈಲ್ವೆ, ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆಗಳು ಹೆಚ್ಚು ಸಮನ್ವಯ ದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಲು ಜಿಲ್ಲೆಯ ಎಲ್ಲಾ 14 ವರ್ಷ ಮೇಲ್ಪಟ್ಟ 15 ವರ್ಷದೊಳಗಿನ ಹೆಣ್ಣು ಮಕ್ಕಳು ಹೆಚ್‌ಪಿವಿ ಲಸಿಕೆಯನ್ನು ಪಡೆಯುವಂತೆ ಪೋಸ್ಟರ್‌ಗಳನ್ನು, ಜಾಗೃತಿ ಕಾರ್ಯ ಕ್ರಮಗಳನ್ನು ಏರ್ಪಡಿಸಬೇಕು. ಪೋಷಕರಿಗೆ ಲಸಿಕೆ ಸುರಕ್ಷಿತವಾಗಿರುವ ಕುರಿತು ಮನದಟ್ಟು ಮಾಡಿಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News