×
Ad

ಉಡುಪಿ| ಕಾರು ಢಿಕ್ಕಿ: ರಸ್ತೆ ದಾಟುತ್ತಿದ್ದ ಬಾಲಕ ಮೃತ್ಯು

Update: 2026-05-15 17:45 IST

ಉಡುಪಿ, ಮೇ 15: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಮೇ 15ರಂದು ಮಧ್ಯಾಹ್ನ ವೇಳೆ ನೇಜಾರಿನ ಜ್ಯೋತಿ ನಗರ ಎಂಬಲ್ಲಿ ನಡೆದಿದೆ.

ಮೃತ ಬಾಲಕನನ್ನು ನೇಜಾರು ಆದರ್ಶ ನಗರದ ಇನಾಯತುಲ್ಲಾ ಎಫ್.ಎಂ. ಹಾಗೂ ಮುಸರ‌್ರಥ್ ಎಫ್.ಎಂ. ದಂಪತಿ ಪುತ್ರ, ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಎಂದು ಗುರುತಿಸಲಾಗಿದೆ.

ಹೂಡೆ ಸಾಲಿಹಾತ್ ಪಿಯು ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಮುಸರ‌್ರಥ್, ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕ ತೆಗೆದುಕೊಂಡು ವಾಪಾಸ್ಸು ಮನೆಗೆ ಬರುತ್ತಿದ್ದಾಗ ದಾರಿ ಮಧ್ಯೆ ರೆಹಮಾನ್, ಜುಮಾ ನಮಾಝ್‌ಗೆ ತೆರಳಲು ನೇಜಾರು ಆಯಿಷಾ ಮಸೀದಿ ಬಳಿ ಇಳಿದಿದ್ದನು.

ಅಲ್ಲಿ ರಸ್ತೆ ದಾಟುತ್ತಿದ್ದ ರೆಹಮಾನ್‌ಗೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆ ಹೋಗುತ್ತಿದ್ದ ಕಾರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಮೃತ ಬಾಲಕ ತಂದೆ ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಿಹಾತ್ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ಧ ಈತನ ಅಗಲಿಕೆಗೆ ಸಾಲಿಹಾತ್ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News