ಕುಂದಾಪುರ, ಸೆ.11: 49ನೇ ಸ್ವಚ್ಛ ಕಡಲ ತೀರ ಹಸಿರು ಕೋಡಿ ಅಭಿಯಾನ ಮತ್ತು ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ ಪ್ರಯುಕ್ತ ಕುಂದಾಪುರ ಪುರಸಭೆಯ ಸಹಯೋಗದೊಂದಿಗೆ ಕೋಡಿಯ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ಜರಗಿತು.

ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ಮಾತನಾಡಿ, ಕಡಲ ತೀರಗಳನ್ನು ಸ್ವಚ್ಛಗೊಳಿಸುವುದು ಕೇವಲ ತಾತ್ಕಾಲಿಕ ಪರಿಹಾರವಲ್ಲ. ಭವಿಷ್ಯದಲ್ಲಿ ಯಾರೂ ಸಮುದ್ರಕ್ಕೆ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಕಡಲತೀರಗಳನ್ನು ಸ್ವಚ್ಛವಾಗಿಟ್ಟುಕೊಂಡು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವನ ಬೇಜವಾಬ್ದಾರಿ ಯಿಂದಾಗಿ ಕಡಲ ತೀರ ಕಸದ ತೊಟ್ಟಿಗಳಾಗುತ್ತಿವೆ. ಕಡಲ ತೀರವೆನ್ನುವುದು ಕೇವಲ ಪ್ರವಾಸಿಗರ ಆಕರ್ಷಣೀಯ ಕೇಂದ್ರ ಮಾತ್ರವಲ್ಲ, ವೈವಿಧ್ಯಮಯ ಜಲಚರ ಜೀವಿಗಳ ತವರು ಕೂಡ ಆಗಿದೆ. ಈ ನಿಟ್ಟಿನಲ್ಲಿ ಕಡಲ ತೀರ ಸ್ವಚ್ಛತೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್ ಬ್ಯಾರಿ, ನಿರ್ದೇಶಕಿ ಅಶ್ವಿನಿ ಶೆಟ್ಟಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು, ಭಂಡಾರ್‌ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಅರುಣ್ ಮತ್ತು ರಾಮಚಂದ್ರ, ಎನ್.ಸಿ.ಸಿ. ಅಧಿಕಾರಿ ಮನೋಹರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದ, ಹಾಗೂ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಕಂಟ್ರೋಲ್ ಸ್ಟೇಷನ್ ಆಫೀಸರ್ ಎಚ್.ಎಚ್.ಖಾಜಿ ಮತ್ತು ನಾವಿಗೇಷನ್ ಅಸಿಸ್ಟೆಂಟ್ ಅಭಿಷೇಕ್ ಶ್ರೀವಾಸ್ತವ್, ರೀಫಾಚ್ ಮರೈನ್ ಕನ್ಸರ್ವೇಟರ್ ಎನ್‌ಜಿಓ ಸಂಯೋಜಕಿ ಅರ್ಪಿತಾ ದತ್ತಾ, ಕುಂದಾಪುರ ಪುರ ಸಭೆಯ ಮುಖ್ಯ ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕುಂದಾಪುರ ಪುರಸಭೆ ಇಂಜಿನಿಯರ್ ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor