Udupi | ಅಗ್ರಿಗೋಲ್ಡ್ ಬಹುಕೋಟಿ ಹಗರಣ; ಆಂಧ್ರ ಸಿಐಡಿ ಅಧಿಕಾರಿಗಳಿಂದ ಸಂತ್ರಸ್ತರ ದಾಖಲೆ ಪರಿಶೀಲನೆ
ಉಡುಪಿ : ಅಗ್ರಿಗೋಲ್ಡ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸಿಐಡಿ ಅಧಿಕಾರಿಗಳು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯವನ್ನು ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸ್ಥಾಪಿಸಲಾದ ವಿಶೇಷ ಬಾಂಡ್ ಪರಿಶೀಲನಾ ಕೇಂದ್ರಗಳಲ್ಲಿ ಆರಂಭಿಸಿದ್ದಾರೆ.
ಅ.29ರಂದು ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿರುವ ಗ್ರಾಹಕರಿಗೆ. ಅ.30ರಂದು ಮುನಿಯಾಲು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ, ಅ.31ರಂದು ಅಜೆಕಾರು ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಹಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪ್ರತಿದಿನ ಪ್ರಥಮವಾಗಿ ಆಗಮಿಸುವ 150 ಗ್ರಾಹಕರಿಗೆ ಮಾತ್ರ ಟೋಕನ್ ನೀಡಲಾಗುವುದು. ಬೆಳಿಗ್ಗೆ 8ಗಂಟೆಯಿಂದ ಟೋಕನ್ ವಿತರಣೆ ಪ್ರಾರಂಭವಾಗುತ್ತದೆ. ಅಂಗವೈಕಲ್ಯ, ಅನಾರೋಗ್ಯ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಸ್ವತಃ ಹಾಜರಾಗಲು ಸಾಧ್ಯವಾಗದ ಗ್ರಾಹಕರ ಪರವಾಗಿ ಅವರ ಏಜೆಂಟ್ಗಳು, ಸಂಬಂಧಿಕರು ಬಾಂಡ್ಗಳನ್ನು ತಂದು ಸಲ್ಲಿಸಬೇಕು. ಅಶಕ್ತರು, ಗರ್ಭಿಣಿಯರು ಹಾಗೂ ವೈದ್ಯಕೀಯ ಸಮಸ್ಯೆ ಹೊಂದಿರುವ ಗ್ರಾಹಕರು ಸಂಬಂಧಿತ ವೈದ್ಯಕೀಯ ಪ್ರಮಾಣಪತ್ರಗಳನ್ನು ಅವರು ಅಥವಾ ಸಂಬಂಧಿಕರು ಕಡ್ಡಾಯವಾಗಿ ತಂದು ಹಾಜರುಪಡಿಸಬೇಕು.
ನ.1ರಂದು ರಜೆ ಇದ್ದು ನ.2ರಿಂದ ಯಾವ ತಾಲೂಕು, ಜಿಲ್ಲೆ ಗ್ರಾಹಕರಿಗೆ ಎಂದು ಅ.31ರ ಸಂಜೆ ಒಳಗೆ ತಿಳಿಸಲಾಗುವುದು. ಅ.29ರಂದು ಹೆಬ್ರಿ ತಾಲೂಕಿನಿಂದ ಬಂದ ಉಳಿದ ಗ್ರಾಹಕರಿಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು. ಈ ಮೂರು ದಿನದಂದು ಹೆಬ್ರಿ ತಾಲೂಕಿನವರಿಗೆ ಮಾತ್ರ ಬರಲು ಅವಕಾಶ ಕಲ್ಪಿಸಲಾಗಿದೆ. ಅದು ಬಿಟ್ಟು ಬೇರೆ ಯಾವುದೇ ತಾಲೂಕಿನವರು ಕೇಂದ್ರಕ್ಕೆ ಆಗಮಿಸಬಾರದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08202526444, ಮೊ-9480805400ನ್ನು ಸಂಪರ್ಕಿಸ ಬಹುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.