ಕಲೆ ಮತ್ತು ಸಂಸ್ಕೃತಿಯ ಕುರಿತು ಅರಿವು ಅಗತ್ಯ: ಎಂ.ಎ.ಗಫೂರ್
ಉಡುಪಿ: ಮನುಷ್ಯನ ಜೀವನ ಶೈಲಿಯು ಒತ್ತಡದೊಂದಿಗೆ ಸಾಗುತ್ತಿದ್ದು, ಕಲೆ ಸಂಸ್ಕೃತಿಯ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಾಗ ಮತ್ತು ಅದರಲ್ಲಿ ತೊಡಗಿಕೊಂಡಾಗ ಜೀವನದ ಬಗ್ಗೆ ವಿಶ್ವಾಸ, ವಿಶೇಷ ಪ್ರೀತಿ ಮೂಡಲು ಸಾಧ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದ್ದಾರೆ.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ನಡೆದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮ ವನ್ನು ಅಯೋಜಿಸಿದೆ. ಕಲೆ, ಸಾಹಿತ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರ ವಾಗಿದ್ದು, ಇತಿಹಾಸದ ಕುರಿತು ಅರಿವು ಮೂಡಿದಾಗ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.
ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಪದ್ಮನಾಭ ಗೌಡ ಉಪಸ್ಥಿತರಿದ್ದರು.
ಯಕ್ಷರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದ ನಂತರ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ಗುಲಾಮನ ಸ್ವಾತಂತ್ರ್ಯ ಯಾತ್ರೆ ನಾಟಕ ಪ್ರದರ್ಶನಗೊಂಡಿತು.