×
Ad

ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ: ಪೂರ್ವಭಾವಿ ಸಭೆ

Update: 2025-12-05 19:05 IST

ಉಡುಪಿ, ಡಿ.5: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ 500 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಡಿ.13ರಂದು ಸಂಜೆ 5.45ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಆವರಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.

ಉಡುಪಿಯ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜನೆ ಜೊತೆ ಸಂದೇಶ ಸಾರುವ ಕಾರ್ಯ ಮಾಡಲಾಗುವುದು. ನಮ್ಮ ದೇಶದಲ್ಲಿರುವಷ್ಟು ಸಾಂಸ್ಕೃತಿಕ ಕಲೆ ಬೇರೆ ಯಾವ ದೇಶದಲ್ಲೂ ಇಲ್ಲ. ಅದೇ ರೀತಿ ಮಾನವ ಸಂಪತ್ತಿನಲ್ಲಿ 52ಕೋಟಿ 25ವರ್ಷದೊಳಗಿನ ಯುವಜನತೆ ಇದ್ದಾರೆ. ಈ ರೀತಿಯ ಮಾನವ ಸಂಪತ್ತು ಜಗತ್ತಿನಲ್ಲಿ ಎಲ್ಲೂ ಇಲ್ಲ. ಇವರನ್ನು ಬಳಸಿಕೊಂಡು ನಮ್ಮ ಕಲೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು ಎಂದರು.

ಆಳ್ವಾಸ್ ಸಂಸ್ಥೆಯಲ್ಲಿ ದತ್ತು ಸ್ವೀಕರಿಸಿದ 3,000 ಮಕ್ಕಳ ಪೈಕಿ 500 ಮಕ್ಕಳಿಗೆ ದೇಶದ ವಿವಿಧ ಕಲೆಗಳ ಬಗ್ಗೆ ತರಬೇತಿ ನೀಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಆಳ್ವಾಸ್ ನುಡಿಸಿರಿ ವಿರಾಸತ್ನ 88 ಘಟಕಗಳನ್ನು ದೇಶ ವಿದೇಶಗಳಲ್ಲಿ ಆರಂಭಿಸಲಾಗಿದೆ. ಈ ವರ್ಷ 50 ಕಡೆಗಳಲ್ಲಿ ಈ ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಸೌಂದರ್ಯ ಪ್ರಜ್ಞೆ ಸೃಷ್ಠಿಸುವುದು ನಮ್ಮ ಉದ್ದೇಶವಾಗಿದೆ. ಸೌಂದರ್ಯ ಪ್ರಜ್ಞೆ ಉಳ್ಳವರು ಕಲೆ, ದೇಶವನ್ನು ಪ್ರೀತಿಸುತ್ತಾರೆ. ಅದು ಇಲ್ಲದವರು ಈ ದೇಶಕ್ಕೆ ಅಪಾಯಕಾರಿ ಎಂದು ಅವರು ಅಭಿಪ್ರಾಯ ಪಟ್ಟರು.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಸಂಘಟಕ ದಾಮೋದರ್ ಶರ್ಮ, ವೈದ್ಯ ಡಾ.ಕಿರಣ್ ಆಚಾರ್ಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ನಿವೃತ್ತ ಪ್ರಾಂಶುಪಾಲ ಎಂ.ಎಲ್.ಸಾಮಗ, ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ವಿ.ಜಿ.ಶೆಟ್ಟಿ, ರಮಣ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News