ಫಾತಿಮಾ ರಲಿಯಾಗೆ 'ಮಯೂರವರ್ಮ ದತ್ತಿ ಪ್ರಶಸ್ತಿ'
Update: 2026-08-20 15:50 IST
ಉಡುಪಿ, ಆ.20: ಕನ್ನಡ ಸಾಹಿತ್ಯ ಪರಿಷತ್ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನೀಡುವ 2024ನೇ ಸಾಲಿನ ಮಯೂರ ವರ್ವ ಸಾಹಿತ್ಯ ದತ್ತಿ ಪ್ರಶಸ್ತಿಗೆ ಯುವ ಲೇಖಕಿ ಫಾತಿಮಾ ರಲಿಯಾ ಆಯ್ಕೆಯಾಗಿದ್ದಾರೆ.
’ಕಡಲು ನೋಡಲು ಹೋದವಳು’, ’ಒಡೆಯಲಾರದ ಒಡಪು’, ’ಅವಳ ಕಾಲು ಸೋಲದಿರಲಿ’, ’ಕೀಮೋ’ ಮತ್ತು ಅನುವಾದಿತ ಮಕ್ಕಳ ಕಥೆ ’ಹಿಪ್ಪೋಗೆ ಕುಣಿಯೋ ಆಸೆ’ ಕೃತಿಗಳನ್ನು ಪ್ರಕಟಿಸಿರುವ ಫಾತಿಮಾ ರಲಿಯಾಗೆ ಶಿವಮೊಗ್ಗದ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ, ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಇಂದಿರಾ ದತ್ತಿ ಪ್ರಶಸ್ತಿ ಲಭಿಸಿದೆ.
ದ.ಕ. ಜಿಲ್ಲೆಯ ಪೆರ್ನೆ-ದೋರ್ಮೆಯ ಅಬ್ದುಲ್ ರಶೀದ್ ಮತ್ತು ಆಯಿಶ ದಂಪತಿಯ ಪುತ್ರಿಯಾಗಿರುವ ಫಾತಿಮಾ ರಲಿಯಾ ಸದ್ಯ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಪುತ್ರಿ ಹಾಗೂ ಪತಿ ಅಬ್ದುಲ್ ಅಝೀಝ್ ರೊಂದಿಗೆ ವಾಸವಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕಗಳು ಹೊಂದಿವೆ ಎಂದು ಪ್ರಕಟನೆ ತಿಳಿಸಿದೆ.