ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನದಲ್ಲಿ ಅಂತಿಮ ನಿರ್ಣಯ ಘೋಷಣೆ: ಹೆಬ್ರಿಯಲ್ಲಿ ಡಿ.ಕೆ. ಶಿವಕುಮಾರ್
► ವರದಿಯ ಸಾಧಕ - ಬಾಧಕಗಳ ಕುರಿತು ನೇರ ಸಂವಾದ ► ಕೇರಳ ಮಾದರಿಯಲ್ಲಿ ಗ್ರಾಮಗಳ ಭೌತಿಕ ಸಮೀಕ್ಷೆಗೆ ಒಕ್ಕೊರಳ ಮನವಿ
ಹೆಬ್ರಿ, ಸೆ.18: ಕಸ್ತೂರಿ ರಂಗನ್ ವರದಿ ಕುರಿತಂತೆ ರಾಜ್ಯದಲ್ಲಿ ಅದರ ವ್ಯಾಪ್ತಿಗೆ ಬರುವ ಬಾಧಿತ ಗ್ರಾಮಗಳ ಗ್ರಾಮಸ್ಥರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸಮಗ್ರ ಮಾಹಿತಿಗಳನ್ನು ಪಡೆದು ಸೆ. 21, 22, 23 ರಂದು ಕರೆದಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಚರ್ಚೆ ಮಾಡಿ ರಾಜ್ಯ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ 24 ಗ್ರಾಪಂಗಳಿಗೆ ಸೇರಿದ 35 ಗ್ರಾಮಗಳ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ವರದಿಯಿಂದ ಬಾಧಿತವಾಗಿರುವ 10 ಜಿಲ್ಲೆಗಳಲ್ಲಿ ವರದಿ ಕುರಿತ ಸಾಧಕ-ಬಾಧಕಗಳ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿಗಳು ನಾಳೆ ತೀರ್ಥಹಳ್ಳಿ ಹಾಗೂ ಬಾಳೆಹೊನ್ನೂರುಗಳಲ್ಲಿ ಗ್ರಾಮಸ್ಥರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಕಸ್ತೂರಿ ರಂಗನ್ ವರದಿಗೆ ಸಂಬಂಧಿದಂತೆ ಈ ಭಾಗದ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಕೇರಳ ಸರಕಾರ ವರದಿ ಕುರಿತು ಈಗಾಗಲೇ ನಡೆಸಿರುವ ತನ್ನ ಗ್ರಾಮಗಳ ಭೌತಿಕ ಸಮೀಕ್ಷೆಯ ಮಾದರಿಯನ್ನು ರಾಜ್ಯ ದಲ್ಲೂ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗು ವುದು ಎಂದವರು ಭರವಸೆ ನೀಡಿದರು.
ನೀವು ಕಸ್ತೂರಿರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್) ನಿಂದ ನಿಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದೀರಿ. ನಾವು 27ರ ಒಳಗೆ ನಮ್ಮ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಬೇಕು. ನಿಮ್ಮ ಅಭಿಪ್ರಾಯ ನಮ್ಮ ಅಭಿಪ್ರಾಯ ಆಗಬೇಕು ಎಂದು ನಾವು ಇಲ್ಲಿಗೆ ಬಂದು ನಿಮ್ಮ ಅಭಿಪ್ರಾಯ ಪಡೆದಿದ್ದೇವೆ. ನೀವೆಲ್ಲರೂ ಕೇರಳ ಮಾದರಿ ಪ್ರಸ್ತಾಪಿಸಿ, ತಜ್ಞರ ಸಮಿತಿಗೆ ಶಿಫಾರಸ್ಸು ಮಾಡಿದ್ದೀರಿ. ನಿಮ್ಮ ಸಲಹೆಗಳನ್ನು ನಾವು ಸ್ವೀಕರಿಸಿದ್ದು, ಈ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದವರು ಸಾವಿರಾರು ಸಂಖ್ಯೆಯಲ್ಲಿ ನೆರೆದ ಬಾಧಿತ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು.
ಈ ಬಗ್ಗೆ 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು, ರೈತರು, ಬರಗಾಲ ಹಾಗೂ ಕಸ್ತೂರಿರಂಗನ್ ವಿಚಾರ ವಾಗಿ ಚರ್ಚೆ ಮಾಡಲಾಗುವುದು. ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರ ಸಲಹೆಯಂತೆ ಮೊದಲ ದಿನವಾದ ಸೋಮವಾರವೇ ಕಸ್ತೂರಿರಂಗನ್ ವರದಿ ಬಗ್ಗೆ ವಿಸ್ತೃತ ಚರ್ಚೆ ಮಾಡಲಾ ಗುವುದು. ನಾಳೆ ನಾನು ಶಿವಮೊಗ್ಗ, ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಅಲ್ಲಿನ ಜನರ ಭಾವನೆಯನ್ನು ಆಲಿಸುವೆ ಎಂದವರು ಹೇಳಿದರು.
ಅಧಿಕಾರಿಗಳಿಗೆ ಸೂಚನೆ: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡಬೇಡಿ ಎಂದು ನಾನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಿದ್ದೇನೆ. ಬಗರಹುಕ್ಕುಂ ಸಾಗುವಳಿ, ಉಳುವವನಿಗೆ ಭೂಮಿ ನೀಡಿರುವುದು ನಮ್ಮ ಸರ್ಕಾರ ಎಂದು ನಿಮಗೆ ತಿಳಿದಿರಬೇಕು ಎಂದರು.
ಅಹವಾಲು ವೇಳೆ ಕೆಲವರು ಪ್ರಸ್ತಾಪಿಸಿದ ಅರಣ್ಯ ಹಕ್ಕು ಕಾಯ್ದೆಯಿಂದಾ ಗುತ್ತಿರುವ ತೊಂದರೆ ಕುರಿತು ಮಾತನಾ ಡಿದ ಮುಖ್ಯಮಂತ್ರಿಗಳು ಇಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷ ಆಗಿರಬೇಕು ಎಂದು ನಿಯಮ ವಿದೆ. ಎಲ್ಲರಿಗೂ 25 ವರ್ಷಗಳ ಮಿತಿಯನ್ನು ನಿಗದಿ ಮಾಡಲು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
‘ನಾವು ಭಾವನೆಗಳ ಮೇಲೆ ರಾಜಕಾರಣ ಮಾಡಲ್ಲ, ನಿಮ್ಮ ಬದುಕಿನ ಮೇಲೆ ನಮಗೆ ಕಾಳಜಿ ಇದೆ. ಮೀನುಗಾರಿಕೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಮುಖ ತೀರ್ಮಾನ ಮಾಡಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ಇಕೋ ಸೋನ್ಸಿಟಿನ್ ರೆನ್, ಹೆಬ್ರಿಯಲ್ಲಿ ತಾಲೂಕು ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ನಿಮ್ಮ ಮುಂದೆ ಘೋಷಣೆ ಮಾಡಿ, ನಂತರ ಅದನ್ನು ಮರೆಯುವ ವ್ಯಕ್ತಿ ನಾನಲ್ಲ. ಸಿಕ್ಕ ಅವಕಾಶದಲ್ಲಿ ನಿಮಗೆ ಕೈಲಾದಷ್ಟು ಸೇವೆ ಮಾಡುವೆ ಎಂದರು.
ತುಳುನಾಡಿನ ಜನ ದೇಶದ ಆಸ್ತಿ.ಈ ಸರ್ಕಾರ ನಿಮ್ಮ ಜೊತೆ ಇದೆ. ಈ ಭಾಗದ ಎಲ್ಲಾ ಪಕ್ಷಗಳ ಶಾಸಕರು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿದ್ದೇವೆ. ಈ ಸಂಪುಟ ಸಭೆಯಲ್ಲಿ 60 ತೀರ್ಮಾನ ಮಾಡಿದ್ದು, ಅದರಲ್ಲಿ 40 ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದರು.
ಭೌತಿಕ ಸಮೀಕ್ಷೆ, ತಜ್ಞರ ಸಮಿತಿಗೆ ಒತ್ತಾಯ: ಇದಕ್ಕೆ ಮೊದಲು ನಡೆದ ಸಂವಾದ ಸಭೆಯಲ್ಲಿ ವರದಿ ಕುರಿತಂತೆ ಈ ಭಾಗದ ವಿವಿಧ ಸಂಘನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಮಾತನಾಡಿದರು. ಹಿರಿಯ ವಕೀಲರಾದ ಟಿ ಬಿ ಶೆಟ್ಟಿ, ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷ ಶ್ರೀಧರ ಗೌಡ, ಉಡುಪಿ ರೈತ ಸಂಘದ ಉದಯ ಕುಮಾರ ವಂಡ್ಸೆ, ಹೆಬ್ರಿ ಗ್ರಾಪಂನ ಮಾಜಿ ಅಧ್ಯಕ್ಷ ನವೀನ್ ಅಡ್ಯಂತ್ತಾಯ, ನಾಡ್ಪಾಲ್ ಗ್ರಾಪಂ ಮಾಜಿ ಸದಸ್ಯ ದಿನೇಶ್ ಹೆಗಡೆ, ಕಾಂಗ್ರೆಸ್ ಮುಖಂಡ, ಉದ್ಯಮಿ ಮುನಿಯಾಲು ಉದಯಕುಮಾರ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಕಸ್ತೂರಿರಂಗನ್ ವರದಿ ವಿಚಾರವಾಗಿ ಜನರಿಗೆ ಎದುರಾಗುವ ಸಮಸ್ಯೆ ಗಳನ್ನು ತಪ್ಪಿಸಲು ಸರಕಾರ ಕೇರಳ ಸರಕಾರ 2014ರಲ್ಲೇ ಮಾಡಿದಂತೆ ತಜ್ಞರ ಸಮಿತಿಯನ್ನು ರಚಿಸಿ ಅದರ ಮೂಲಕ ಪ್ರತಿ ಗ್ರಾಮಗಳ ಭೌತಿಕ ಸಮೀಕ್ಷೆ ನಡೆಸಿ ವರದಿಯನ್ನು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ಗೆ ನೀಡಬೇಕು ಎಂಬುದು ಹೆಚ್ಚಿನವರ ಒಕ್ಕೊರಳ ಒತ್ತಾಯವಾಗಿತ್ತು.
ಇದರಿಂದ ಕೇರಳ ಸಲ್ಲಿಸಿದ ವರದಿಯನ್ನು ನ್ಯಾಯಾಲಯ ಹಾಗೂ ಕೇಂದ್ರ ಸರಕಾರ ಒಪ್ಪಿಕೊಂಡು, ಕಸ್ತೂರಿರಂಗನ್ ವರದಿಯಲ್ಲಿದ್ದ 13,000 ಚ.ಕಿ. ಮೀ. ಭೂಪ್ರದೇಶವನ್ನು 9,000ಚ.ಕಿ.ಮೀ.ಗೆ ಇಳಿಸಲು ಯಶಸ್ವಿಯಾಗಿತ್ತು ಎಂದವರು ವಿವರಿಸಿದರು.
ಸಮೀಕ್ಷೆ ಮೂಲಕ ಅಲ್ಲಿ ನಾಡು ಹಾಗೂ ಕಾಡನ್ನು ಬೇರ್ಪಡಿಸಿ ಗಡಿಯನ್ನು ಗುರುತಿಸಲಾಗಿದೆ. ಇದನ್ನೇ ರಾಜ್ಯದಲ್ಲೂ ಮಾಡಿದರೆ ಈಗಿರುವ 20,000 ಚ.ಕಿ.ಮೀ. ವ್ಯಾಪ್ತಿಯನ್ನು 5000ಚ.ಕಿ.ಮೀನಷ್ಟು ಕಡಿಮೆ ಮಾಡಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅವರು ಸಭೆಯನ್ನು ದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಸುನಿಲ್‌ಕುಮಾರ್, ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಾಂಗ್ರೆಸ್ ಮುಖಂಡರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಗೋಪಾಲ ಪೂಜಾ, ಎಂ.ಎ.ಗಫೂರ್, ಅಶೋಕ ಕುಮಾರ್ ಕೊಡವೂರು, ಅರಣ್ಯ, ವನ್ಯಜೀವಿ ವಿಭಾಗ ಹಾಗೂ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅತಿಥಿಗಳನ್ನು ಸ್ವಾಗತಿಸಿದರು. ಕೆ.ಸಿ.ರಾಜೇಶ್ ಹಾಗೂ ಡಾ.ರೋಷನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.