ಬಂಧಿತ ಆರೋಪಿಗಳು

ಉಡುಪಿ: ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕುಖ್ಯಾತ ಜಾಲವನ್ನು ಮಣಿಪಾಲ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ತಾಲೂಕಿನ ಉದ್ಯಾವರ ಕಟಪಾಡಿ ಪಳ್ಳಿಗುಡ್ಡೆ ನಿವಾಸಿ ಅಕ್ಬರ್ ಮಹಮ್ಮದ್ ಬ್ಯಾರಿ (44) ಹಾಗೂ ಬೆಂಗಳೂರಿನ ಎಂ.ಎಸ್.ಪಾಳ್ಯದ ನಿವಾಸಿ ಸೈಯದ್ ಸುಹೇಲ್ (26) ಬಂಧಿತ ಆರೋಪಿಗಳು. ಇವರು ವಿದ್ಯಾರ್ಥಿಗಳಿಗೆ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದರು ಏಂದು ಹೇಳಲಾಗಿದೆ.

ಸೆ.17ರ ಮಧ್ಯರಾತ್ರಿ 12:10ರ ಸುಮಾರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಶಿವಳ್ಳಿ ಗ್ರಾಮದ ಪೆರಂಪಳ್ಳಿ ಬ್ರಿಡ್ಜ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂಬಾಗಿಲು ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಗಳಿಂದ ಸುಮಾರು 1 ಲಕ್ಷ ರೂ. ಮೌಲ್ಯದ 30 ಗ್ರಾಂ ಎಂಡಿಎಂಎ ಡ್ರಗ್ಸ್, 40 ಸಾವಿರ ರೂ. ಮೌಲ್ಯದ 4 ಮೊಬೈಲ್ ಫೋನ್, 5 ಸಾವಿರ ರೂ. ಮೌಲ್ಯದ ಡಾಂಗಲ್, 9,500 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ 3 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಸೇರಿ ಒಟ್ಟು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಮಣಿಪಾಲ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor