×
Ad

ಕಲ್ಯಾಣಪುರ | ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Update: 2025-12-09 22:18 IST

ಕಲ್ಯಾಣಪುರ, ಡಿ.9: ರಾಜ್ಯದಲ್ಲೇ ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಪ್ರತಿವರ್ಷ ಎಸೆಸೆಲ್ಸಿ ಮತ್ತು ಪಿಯುಸಿ ತರಗತಿಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನವನ್ನು ರಾಜ್ಯಮಟ್ಟದಲ್ಲಿ ಪಡೆಯುತ್ತ ಬರುತ್ತಿದೆ. ಅದೇ ರೀತಿ ಪಠ್ಯೇತರ ವಿಷಯಗಳಲ್ಲೂ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿರಬೇಕು ಎಂದು ಎಲ್ಲರೂ ಬಯಸುತ್ತಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಆಯೋಜಿಸಲಾದ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿ-2025 ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಪ್ಪತ್ತು ವರ್ಷಗಳಿಂದ ಪ್ರತಿಭಾ ಕಾರಂಜಿ ಸ್ಫರ್ಧೆಗಳು ನಡೆಯುತಿದ್ದು,  ಪಠ್ಯೇತರ ವಿಷಯಗಳಾದ ಭರತನಾಟ್ಯ, ಸಂಗೀತ, ಭಾಷಣ, ಚರ್ಚೆ, ಕ್ವಿಜ್, ಚಿತ್ರಕಲೆಗಳಲ್ಲೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನಿಯಾಗಬೇಕು ಎಂದು ಅವರು ಹೇಳಿದರು. ಸಂಸ್ಥೆ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಉಡುಪಿ ಜಿಲ್ಲೆ ಸಾಂಸ್ಕೃತಿಕ ನಗರಿಯಾಗಬೇಕಾದರೆ ಶಾಸ್ತ್ರೀಯ ಸಂಗೀತ, ನಾಟ್ಯ, ಪದ್ಯರಚನೆಯಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಡಾ. ರೋಕ್ ಡಿ’ಸೋಜ ವಹಿಸಿದ್ದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎ ಗಫೂರ್, ಡಯೆಟ್ ಉಡುಪಿ ಪ್ರಾಂಶುಪಾಲ ಆಶೋಕ್ ಕಾಮತ್, ಚರ್ಚಿನ ಸಹಾಯಕ ಧರ್ಮಗುರು ವ್.ರೋಹನ್, ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ, ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೋಡಲ್ ಅಧಿಕಾರಿ ನಾಗರಾಜ್ ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News