ಕಾರ್ಕಳ : ಜೈ ಭೀಮ್ ಯುವ ಸೇನಾ ಸಮಾವೇಶ
ಜಾತಿ ವ್ಯವಸ್ಥೆ ನಿರ್ಮೂಲನೆಯೇ ನಿಜವಾದ ಸಮಾನತೆಗೆ ದಾರಿ : ಡಾ. ನಾಗಲಕ್ಷ್ಮೀ ಚೌಧರಿ
ಕಾರ್ಕಳ: “ನಮ್ಮ ಸಮಾಜದ ರಕ್ತಗತವಾಗಿ ಬೆರೆತು ಹೋಗಿರುವ ಜಾತಿ ವ್ಯವಸ್ಥೆ ಎಂಬ ಹೆಮ್ಮರವನ್ನು ಬುಡಸಮೇತ ಕಿತ್ತೆಸೆಯುವವರೆಗೂ ಇಲ್ಲಿ ನಿಜವಾದ ಸಮಾನತೆ ಸಾಧ್ಯವಿಲ್ಲ. ಯಾರಾದರೂ ನಿಮ್ಮ ಜಾತಿ ಯಾವುದು ಎಂದು ಕೇಳಿದರೆ ತಲೆ ತಗ್ಗಿಸಬೇಡಿ. ‘ನಾನು ಹೆಣ್ಣು’ ಅಥವಾ ‘ನಾನು ಗಂಡು’ ಎಂದು ಹೆಮ್ಮೆಯಿಂದ ಹೇಳಿ. ಇಡೀ ಜಗತ್ತಿನಲ್ಲಿ ಇರುವುದು ಒಂದೇ ಮಾನವ ಜಾತಿ,” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.
ಕಾರ್ಕಳ ಬಂಡಿಮಠದಲ್ಲಿ ನಡೆದ ಜೈ ಭೀಮ್ ಯುವ ಸೇನಾ ಸಮಾವೇಶದಲ್ಲಿ ಜಾತಿ ವ್ಯವಸ್ಥೆ, ಮಹಿಳಾ ಸಬಲೀಕರಣ ಮತ್ತು ಅಂತರ್ಜಾತಿ ವಿವಾಹಗಳ ಕುರಿತು ಅವರು ಮಾತನಾಡುತ್ತಿದ್ದರು.
ತಮ್ಮ ಜೀವನದ ಹೋರಾಟದ ಅನುಭವಗಳನ್ನು ಹಂಚಿಕೊಂಡ ಡಾ. ನಾಗಲಕ್ಷ್ಮೀ ಅವರು, “ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಿಂತ ಬಾಲ್ಯವಿವಾಹಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಆದರೆ ನನ್ನ ಪೋಷಕರು ಸಮಾಜದ ವಿರೋಧದ ನಡುವೆಯೂ ನನಗೆ ಉನ್ನತ ಶಿಕ್ಷಣ ಕಲಿಸಿದರು. ಅವರ ಪ್ರಗತಿಪರ ಚಿಂತನೆಯ ಫಲವಾಗಿ ನಾನು ಇಂದು ಡಾಕ್ಟರ್ ಆಗಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ದುರದೃಷ್ಟವಶಾತ್, ನನ್ನ ಈ ಸಾಧನೆಯನ್ನು ನೋಡಲು ಇಂದು ನನ್ನ ಹೆತ್ತವರು ಬದುಕಿಲ್ಲ. ಆದರೆ ಈ ಸಮಾಜವೇ ಇಂದು ನನ್ನನ್ನು ಮಗಳಂತೆ ಕಾಣುತ್ತಿದೆ,” ಎಂದು ಭಾವುಕರಾಗಿ ಹೇಳಿದರು.
ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ಅವರು, “ನಿಮ್ಮನ್ನು ನೀವು ಎಂದಿಗೂ ಅಬಲೆಯರೆಂದು ಭಾವಿಸಬೇಡಿ. ಕೀಳರಿಮೆ ಬಿಟ್ಟು ಸಾಧನೆಯ ಶಿಖರ ಏರಬೇಕು,” ಎಂದರು.
ಅಂತರ್ಜಾತಿ ವಿವಾಹಗಳ ಕುರಿತು ಮಾತನಾಡಿದ ಅವರು, “ಮಾತಿನಲ್ಲಷ್ಟೇ ಅಲ್ಲ, ಬದುಕಿನಲ್ಲೂ ಜಾತಿಮುಕ್ತ ಚಿಂತನೆ ಬರಬೇಕು. ಬೇರೆ ಜಾತಿಯವರನ್ನು ಮದುವೆಯಾಗಬಾರದು ಎನ್ನುವ ಸಂಕುಚಿತ ಮನೋಭಾವವನ್ನು ಯುವಜನತೆ ತಳ್ಳಿ ಹಾಕಬೇಕು. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನದಲ್ಲಿ ಅಂತರ್ಜಾತಿ ವಿವಾಹವನ್ನು ಅಳವಡಿಸಿಕೊಂಡಾಗ ಮಾತ್ರ ಜಾತಿಮುಕ್ತ ಸಮಾಜ ನಿರ್ಮಾಣ ಸಾಧ್ಯ,” ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿದ ಅವರು, “ಯಾವ ಸಮುದಾಯದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಇಲ್ಲ ಎಂದು ಹೇಳಲು ಸಾಧ್ಯ? ಜಾತಿ, ಧರ್ಮ, ವರ್ಗ ಯಾವುದಾದರೂ ಇರಲಿ, ಮಹಿಳೆಯರು ಇಂದು ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದರ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅವರು ವೇದಿಕೆ ಮುಂಭಾಗದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ವೇದಿಕೆಗೆ ಕರೆಸಿ, ಸರ್ಕಾರದ ಯೋಜನೆಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೂರು ನೀಡುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ವಿಶೇಷ ಜಾಗೃತಿ ಮೂಡಿಸಿದರು.
ತಮ್ಮ ಮನೆಗೆ ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಧೈರ್ಯವಂತ ಬಾಲಕಿ ಶ್ರಾವ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭಾರತೀಯ ಭೂಸೇನೆಯ ನಿವೃತ್ತ ಯೋಧ ಆನಂದ್ ಕಬ್ಬಿನಾಲೆ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರಾದ ಸಾರ್ವಿಕ್ ಮತ್ತು ಧನ್ಯಶ್ರೀ ಅವರನ್ನು ಗೌರವಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬ್ಯಾಗ್, ಛತ್ರಿ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಸೌಖ್ಯದಿಂದ ಬಳಲುತ್ತಿದ್ದವರಿಗೆ ಆರ್ಥಿಕ ನೆರವೂ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ, “ಸಮಾನತೆ ಯಾರೂ ಕೊಡುವುದಿಲ್ಲ, ಅದನ್ನು ನಾವು ಪಡೆದುಕೊಳ್ಳಬೇಕು. ಸಾಧನೆ ಮಾಡಲು ಕರಾವಳಿ ಭಾಗ ಸೂಕ್ತ ಭೂಮಿ. ಯುವಕರು ಸಮಾಜದ ಬಗ್ಗೆ ಚಿಂತನೆಯೊಂದಿಗೆ ಮುಂದೆ ಬರಬೇಕು,” ಎಂದು ಹೇಳಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಪ್ರದೀಪ್ ಕುಮಾರ್, ಜಾನ್ ಆರ್. ಡಿಸೋಜಾ, ಸತೀಶ್ ಆರ್. ಮೂಡಬಿದ್ರೆ, ಶ್ರೀಲತಾ, ಸಮದ್ ಖಾನ್, ಉಷಾ, ತಿಮ್ಮಪ್ಪ, ಪ್ರತಿಮಾ ರಾಣೆ, ಕುಮಾರ್ ನಾಯ್ಕ್, ಶಾಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ ಜೈ ಭೀಮ್ ಯುವ ಸೇನೆಯ ರಾಜ್ಯಾಧ್ಯಕ್ಷ ಎಸ್. ಪಿ. ಅಶೋಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷೆ ವಾಣಿ ಸ್ವಾಗತಿಸಿದರು. ಸವಿತಾ ವರದಿ ವಾಚಿಸಿದರು. ನಳಿನಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.