ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆ
ಕಾರ್ಕಳ: ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘ (ರಿ), ಕಾರ್ಕಳ ಅಧ್ಯಕ್ಷರು ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಮಸ್ತಕಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಕಾರ್ಕಳ ಮತ್ತು ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿಗಾಗಿ 70 ಕೋಟಿ ರೂ. ಅನುದಾನವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಸ್ತಕಾಭಿಷೇಕದ ಯಶಸ್ವಿ ಆಯೋಜನೆಗಾಗಿ ಒಟ್ಟು 36 ಸಮಿತಿಗಳನ್ನು ರಚಿಸಲಾಗಿದ್ದು, ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವ ಉದ್ದೇಶದಿಂದ ಮಹಿಳಾ ಸಮಿತಿಯನ್ನೂ ರಚಿಸಲಾಗುವುದು. ಜೊತೆಗೆ, ಪ್ರತಿಭೆ ಮತ್ತು ಆಸಕ್ತಿಗೆ ಅನುಗುಣವಾಗಿ ಸಮಿತಿಗಳಿಗೆ ಸದಸ್ಯರನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಕಳ ಗೊಮ್ಮಟಬೆಟ್ಟದಿಂದ ಆನೆಕೆರೆವರೆಗೆ, ಅನಂತಶಯನದಿಂದ ಗೊಮ್ಮಟಬೆಟ್ಟದವರೆಗೆ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಅಗಲೀಕರಣ ಕುರಿತು ಚಿಂತನೆ ನಡೆಸಲಾಗಿದೆ. ಅಲ್ಲದೆ ಮಠದ ಗೆಸ್ಟ್‌ಹೌಸ್ ನವೀಕರಣ, ಯಾತ್ರಿ ನಿವಾಸದ ಅಭಿವೃದ್ಧಿ, ಹಾಗೂ ಯಾತ್ರಿ ನಿವಾಸದ ಕೋಣೆಗಳ ಸಂಖ್ಯೆ ಹೆಚ್ಚಿಸುವ ಕಾರ್ಯಗಳನ್ನು ಅಲ್ಪಸಂಖ್ಯಾತ ಇಲಾಖೆಯ ಅನುದಾನದಿಂದ ಕೈಗೊಳ್ಳಲಾಗುವುದು, ಇದರಿಂದ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಊರುಗಳಿಂದ ಆಗಮಿಸಿದ ಜೈನ ಶ್ರಾವಕ–ಶ್ರಾವಕಿಯರು ಮಸ್ತಕಾಭಿಷೇಕದ ಪೂರ್ವ ತಯಾರಿ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮೋಹನ್ ಪಾಡಿವಾಳ್, ಅಂಡಾರ್ ಮಹಾವೀರ್ ಜೈನ್, ಅನಂತ್ ರಾಜ್ ಪೂವಣಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪುಷ್ಪರಾಜ್ ಜೈನ್, ಸುಧೀರ್ ಪಾಡಿವಾಳ್, ರತ್ನಾಕರ್ ರಾಜ್, ಡಾ. ಜೀವಂದರ್ ಬಲ್ಲಾಳ್ ಕಾಂತಾವರ, ಕೆ.ಸಿ. ಧರಣೇಂದ್ರ ಕಳಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಜಿತ್ ಕೊಕ್ರಾಡಿ ಅವರು ನಿರೂಪಿಸಿದರು.