ಮಣಿಪಾಲ, ನ.25: ಮಣಿಪಾಲ ಅಕಾಡೆಮಿಆಫ್ ಹೈಯರ್ ಎಜುಕೇಶನ್ (ಮಾಹೆ) ಘಟಕ ಸಂಸ್ಥೆಯಾದ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಕಸ್ತೂರ್ಬಾ ಆಸ್ಪತ್ರೆಯು ‘ದಿ ವೀಕ್-ಹನ್ಸಾ ರಿಸರ್ಚ್ ಬೆಸ್ಟ್ ಹಾಸ್ಪಿಟಲ್ಸ್ ಸರ್ವೆ 2026’ರಲ್ಲಿ ಮೂಳೆರೋಗ ಚಿಕಿತ್ಸೆ (ಆರ್ಥೋಪೆಡಿಕ್ಸ್) ವಿಭಾಗದಲ್ಲಿ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 9ನೇ ಸ್ಥಾನ ಹಾಗೂ ದಕ್ಷಿಣ ಭಾರತದ ಅತ್ಯುತ್ತಮ ಆಸ್ಪತ್ರೆಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.

ಈ ಶ್ರೇಯಾಂಕಗಳು ‘ದಿ ವೀಕ್’ ನಿಯತಕಾಲಿಕದ ನವೆಂಬರ್ 29ರ ಸಂಚಿಕೆಯಲ್ಲಿ ಪ್ರಕಟವಾಗಿವೆ. 782 ಸಾಮಾನ್ಯ ವೈದ್ಯರು ಹಾಗೂ 1,458 ತಜ್ಞ ವೈದ್ಯರು ಸೇರಿದಂತೆ, 19 ನಗರಗಳು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಸುಮಾರು 2,240 ವೈದ್ಯರ ಸಮೀಕ್ಷೆಯನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನೀಡಲಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ವೈದ್ಯರು, ಆಸ್ಪತ್ರೆಗಳ ಖ್ಯಾತಿ, ವೈದ್ಯರ ಸಾಮರ್ಥ್ಯ, ಮೂಲಸೌಕರ್ಯ, ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ರೋಗಿಗಳ ಆರೈಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿದ್ದಾರೆ. ನಂತರ ಫಲಿತಾಂಶಗಳನ್ನು ಆಸ್ಪತ್ರೆಗಳ ದತ್ತಾಂಶ ಹಾಗೂ ತಜ್ಞರೊಂದಿಗಿನ ಸಂದರ್ಶನಗಳ ಮೂಲಕ ಪರಿಶೀಲಿಸಲಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್, ಈ ಶ್ರೇಯಾಂಕವು ದೇಶಾದ್ಯಂತದ ಸಹ ವೈದ್ಯರಿಂದಲೇ ಬಂದಿರುವುದರಿಂದ ತುಂಬಾ ಅರ್ಥಪೂರ್ಣವಾಗಿದೆ. ಉತ್ತಮ ರೋಗಿ ಆರೈಕೆ, ಸದೃಢ ಬೋಧನೆ ಮತ್ತು ಅರ್ಥಪೂರ್ಣ ಸಂಶೋಧನೆ ಜೊತೆಜೊತೆಯಾಗಿ ಸಾಗುತ್ತವೆ ಎಂಬ ನಂಬಿಕೆಯ ಮೇಲೆ ಮಾಹೆಯ ಬೋಧನಾ ಆಸ್ಪತ್ರೆಗಳು ರೂಪುಗೊಂಡಿವೆ. ಈ ಅರ್ಹ ಮನ್ನಣೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆರ್ಥೋಪೆಡಿಕ್ಸ್ ವಿಭಾಗ ಹಾಗೂ ಇಡೀ ತಂಡವನ್ನು ಅಭಿನಂದಿಸುತ್ತೇನೆ ಎಂದರು.

ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಆರು ದಶಕಗಳಿಗೂ ಹೆಚ್ಚು ಕಾಲದಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಕರಾವಳಿ ಕರ್ನಾಟಕ ಹಾಗೂ ವಿವಿಧ ಜಿಲ್ಲೆಗಳ ಜನರಿಗೆ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದೆ. ಇಂದು ನಮ್ಮ ರೋಗಿಗಳಿಗೆ ರೋಬೋಟಿಕ್ ನೆರವಿನ ಕೀಲು ಬದಲಿ ಶಸ್ತ್ರಚಿಕಿತ್ಸೆ, 3 ಟೆಸ್ಲಾ ಎಂಆರ್‌ಐ ಇಮೇಜಿಂಗ್ ಹಾಗೂ ಅನುಭವಿ ತಜ್ಞ ವೈದ್ಯರ ಸೇವೆ ಮನೆಯ ಸಮೀಪದಲ್ಲೇ ಲಭ್ಯವಿದೆ. ದೇಶಾದ್ಯಂತದ ವೈದ್ಯರು ಮತ ಚಲಾಯಿಸಿದ ಸಮೀಕ್ಷೆಯಲ್ಲಿ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಉನ್ನತ ಸ್ಥಾನ ಪಡೆದಿರುವುದು ಈ ಬದ್ಧತೆಗೆ ದೊರೆತ ಬಲವಾದ ಮನ್ನಣೆಯಾಗಿದೆ ಎಂದರು.

1967ರಲ್ಲಿ ಸ್ಥಾಪನೆಯಾದ ಆರ್ಥೋಪೆಡಿಕ್ಸ್ ವಿಭಾಗವು ಇಂದು ಐದು ವಿಶೇಷ ಘಟಕಗಳು ಹಾಗೂ ಮೀಸಲಾದ ಕ್ಲಿನಿಕ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಕೈಯ ಜನ್ಮಜಾತ ವ್ಯತ್ಯಾಸದೊಂದಿಗೆ ಜನಿಸಿದ ಮಗುವಿನಿಂದ ಹಿಡಿದು ಮಂಡಿ ಬದಲಿ ಅಗತ್ಯವಿರುವ ಹಿರಿಯ ರೋಗಿಯವರೆಗೆ, ಮೂಳೆ, ಕೀಲು ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.

ವಿಭಾಗದ ರೋಬೋಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ರೋಬೋಟಿಕ್ ನೆರವಿನ ಸೊಂಟದ ಕೀಲು ಮತ್ತು ಮಂಡಿ ಬದಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಇಲ್ಲಿನ ಶಸ್ತ್ರಚಿಕಿತ್ಸಕರು ರಿವಿಷನ್ ಶಸ್ತ್ರಚಿಕಿತ್ಸೆಗಳು ಹಾಗೂ ಭುಜ ಮತ್ತು ಮೊಣಕೈ ಬದಲಿ ಶಸ್ತ್ರಚಿಕಿತ್ಸೆಗಳನ್ನೂ ನಡೆಸುತ್ತಾರೆ. ಮಂಡಿಯ ಅಸ್ಥಿರಜ್ಜು ಹರಿಯುವಿಕೆಯಂತಹ ಕ್ರೀಡಾ ಗಾಯಗಳಿಗೆ ಕೀಹೋಲ್ (ಆರ್ಥ್ರೋಸ್ಕೋಪಿಕ್) ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor