ಉಡುಪಿ, ನ.25: ಕಾರ್ಕಳ ಶಾಸಕ ಸುನೀಲ್ ಕುಮಾರ್ ತಮ್ಮ ವಿರುದ್ಧ ಮಾಡಿರುವ ಹಣ ಬಾಕಿ ಆರೋಪಕ್ಕೆ ತೀವ್ರ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ನಾನು ಯಾರಿಗೆ ಎಷ್ಟು ಹಣ ಕೊಡಲು ಬಾಕಿ ಉಳಿಸಿಕೊಂಡಿದ್ದೇನೆ ಎಂಬುದನ್ನು ಶಾಸಕ ಸುನೀಲ್ ಕುಮಾರ್ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅವರಿಗೆ ಎಷ್ಟು ಹಣ ಕೊಡಲು ಬಾಕಿ ಇದೆ ? ಗೋಣಿ ಚೀಲದಲ್ಲಿ ಕೊಟ್ಟಿದ್ದಾರೋ ಅಥವಾ ಬ್ಯಾಂಕ್ ಖಾತೆಗೆ ಹಾಕಿದ್ದಾರೋ ಎಂಬುದನ್ನು ಇಂದೇ ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದರು.

ನಾನು ರೈತ ಕುಟುಂಬದಿಂದ ಬಂದಿದ್ದು, ಕಷ್ಟಪಟ್ಟು ಉದ್ಯಮವನ್ನು ಬೆಳೆಸಿಕೊಂಡಿದ್ದೇನೆ. ಕಳೆದ 26ರಿಂದ 30 ವರ್ಷಗಳಿಂದ ಸಿವಿಲ್ ಕಾಂಟ್ರಾಕ್ಟ್, ಕ್ರಷರ್, ಗೇರುಬೀಜ ಮತ್ತು ಮೀನುಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದೇನೆ. ಉದ್ಯಮಗಳ ಮೂಲಕ ಈವರೆಗೆ 100 ಕೋಟಿಗೂ ಅಧಿಕ ಆದಾಯ ತೆರಿಗೆ ಹಾಗೂ 300 ಕೋಟಿಗೂ ಹೆಚ್ಚು ಜಿಎಸ್‌ಟಿ ಪಾವತಿಸಿದ್ದೇನೆ ಎಂದು ಅವರು ತಿಳಿಸಿದರು.

ನನ್ನ ಕಂಪನಿಯ ಬ್ಯಾಲೆನ್ಸ್ ಶೀಟ್ ಅನ್ನು ಸಾರ್ವಜನಿಕವಾಗಿ ತೋರಿಸಲು ಸಿದ್ಧನಿದ್ದೇನೆ. ಯಾರಿಗಾದರೂ ಒಂದು ರೂಪಾಯಿ ಮೋಸ ಮಾಡಿದ್ದರೆ ಅದನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದರು.

ಕಾರ್ಕಳದಲ್ಲಿ ಉದ್ಯಮ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಸುನೀಲ್ ಕುಮಾರ್ ಅವರಿಂದ ಕಿರುಕುಳ ಎದುರಿಸಬೇಕಾಯಿತು. ಈ ಕಾರಣದಿಂದಾಗಿ ಕಾರ್ಕಳದ ಹೊರ ಜಿಲ್ಲೆಗಳಲ್ಲಿ ಉದ್ಯಮ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ನನ್ನ ವಿರುದ್ಧ ರಾಜಕೀಯ ಒತ್ತಡ ಹೇರಿ ಆದಾಯ ತೆರಿಗೆ ದಾಳಿ ನಡೆಸಲಾಗಿದೆ. ಈ ಬೆಳವಣಿಗೆಗಳಿಂದ ತಮ್ಮ ಕುಟುಂಬದ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂದು ದೂರಿದರು.

ಒಂದು ಗೂಡಂಗಡಿಯೂ ಇಲ್ಲದೆ ಕಾರ್ಕಳಕ್ಕೆ ಬಂದ ಸುನೀಲ್ ಕುಮಾರ್ ಇಂದು ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿದ್ದು ಹೇಗೆ ? ಎಂದು ಪ್ರಶ್ನಿಸಿದ ಅವರು, ಮಲ್ಪೆ, ಮಣಿಪಾಲ, ಬೆಂಗಳೂರು ಹಾಗೂ ಆಂಧ್ರ ಪ್ರದೇಶದಲ್ಲಿ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಈ ಹಿಂದೆ ಆರೋಪಗಳು ಕೇಳಿಬಂದಿವೆ ಎಂದು ಅವರು ಆರೋಪಿಸಿದರು.

ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಈ ವಿವಾದದಿಂದ ಕಾರ್ಕಳದ ಗೌರವಕ್ಕೆ ಧಕ್ಕೆಯಾಗಿದೆ. ಗೋಮಾಳ ಜಾಗವನ್ನು ಬಿಟ್ಟು ಬೇರೆ ಸೂಕ್ತ ಸ್ಥಳದಲ್ಲಿ ಹೊಸ ಟೆಂಡರ್ ಮೂಲಕ ಶಾಸ್ತ್ರೋಕ್ತವಾಗಿ ಪರಶುರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor