ಕುಂದಾಪುರ | ಬೇಳೂರು ಗ್ರಾಮ ಪಂಚಾಯತ್ಗೆ ಲೋಕಾಯುಕ್ತ ಪೊಲೀಸರಿಂದ ದಾಳಿ
ಬಾಕಿ ಕಡತಗಳ ಪರಿಶೀಲನೆ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಕುಂದಾಪುರ: ಸರಕಾರಿ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ಕಚೇರಿಗೆ ಉಡುಪಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಸರ್ಚ್ ವಾರಂಟ್ ಪಡೆದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಪಡೆದಿದ್ದು ಹಲವು ಸಮಯಗಳಿಂದ ಬಾಕಿಯಿದ್ದ ಕಡತಗಳ ಪರಿಶೀಲನೆ ಜೊತೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ಮಧ್ಯಾಹ್ನದವರೆಗೂ ಮುಂದುವರೆದಿದ್ದು, ಗ್ರಾ.ಪಂ ಸಂಬಂಧಿತ ಬಾಕಿ ಕಡತಗಳು, ದಾಖಲೆ ಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ, ಸಿಬ್ಬಂದಿಗಳಾದ ಅರುಣ ಕುಮಾರ್, ಅಬ್ದುಲ್ ಜಲಾಲ್, ಆದರ್ಶ, ಸೂರಜ್ ಕಾಪು ಮೊದಲಾದವರು ಕಾರ್ಯಾಚರಣೆಯಲ್ಲಿ ಇದ್ದರು.