×
Ad

ಉಡುಪಿ ನಗರದ ಜುವೆಲ್ಲರಿ ವರ್ಕ್‌ಶಾಪ್‌ನಲ್ಲಿ ಭಾರೀ ಕಳ್ಳತನ; 95.71ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳವು

Update: 2025-09-09 22:06 IST

ಉಡುಪಿ, ಸೆ.9: ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನ ಮಾರುತಿ ವೀಥಿಕಾ ಬಳಿ ಜುವ್ಯೆಲ್ಲರಿ ವರ್ಕ್‌ಶಾಪ್‌ಗೆ ಸೋಮವಾರ ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಕುಮಟೆ ಮೂಲದ, ಪ್ರಸ್ತುತ ನಗರದ ಅಪಾರ್ಟ್‌ಮೆಂಟ್ ನಿವಾಸಿ ವೈಭವ್ ಮೋಹನ ಘಾಟಗೆ ಎಂಬವರಿಗೆ ಸೇರಿದ ಮಾರುತಿ ವೀಥಿಕಾ ಬಳಿಯ ಉಪೇಂದ್ರ ಎಂಬ ಕಟ್ಟಡದ ನೆಲಮಹಡಿಯಲ್ಲಿ ರುವ ವೈಭವ ಗೋಲ್ಡ್ ಆ್ಯಂಡ್ ಸಿಲ್ವರ್ ಮೆಲ್ಟಿಂಗ್ ಮತ್ತು ರಿಫೈನರಿ ಅಂಗಡಿಗೆ ಸೆ.8ರ ರಾತ್ರಿ 10ಗಂಟೆಗೆ ಬೀಗ ಹಾಕಿ ಹೋಗಿದ್ದು, ಬೆಳಗ್ಗೆ ಸೆ.9ರಂದು ಬೆಳಗ್ಗೆ 7ಗಂಟೆಗೆ ವೈಭವ್ ಮೋಹನ ಘಾಟಗೆ ಅವರ ಸಂಬಂಧಿ ಆದರ್ಶ ಅಂಗಡಿಗೆ ಹೋದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳರು ಅಂಗಡಿಯ ಶಟರ್‌ನ ಬಾಗಿಲಿನ ಬೀಗವನ್ನು ಯಾವುದೋ ನಕಲಿ ಕೀಯನ್ನು ಉಪಯೋಗಿಸಿ ತೆಗೆದು ಒಳ ನುಗ್ಗಿದ್ದು, ರಿಫೈನರಿ ಮೆಷಿನ್‌ನಲ್ಲಿ ಇರಿಸಿದ್ದ 65.96ಲಕ್ಷ ರೂ. ಮೌಲ್ಯದ ಸುಮಾರು 680 ಗ್ರಾಂ ಚಿನ್ನ ಹಾಗೂ ಅಂಗಡಿಯ ಚಿನ್ನ ಇಡುವ ಡ್ರಾವರ್ ಬೀಗವನ್ನು ನಕಲಿ ಕೀಯಿಂದ ತೆಗೆದು ಅದರೊಳಗಿದ್ದ ರಿಫೈನ್ ಮಾಡಿದ್ದ 22ಲಕ್ಷ ರೂ. ಮೌಲ್ಯದ ಸುಮಾರು 200 ಗ್ರಾಂ ಚಿನ್ನ ಮತ್ತು ರಿಫೈನ್ ಮಾಡಿದ್ದ ಸುಮಾರು 6.25ಲಕ್ಷ ರೂ. ಮೌಲ್ಯದ 5 ಕೆಜಿ ತೂಕದ ಬೆಳ್ಳಿಯ ಸಣ್ಣ ಸಣ್ಣ ಗಟ್ಟಿಗಳು, 1,50,000ರೂ. ನಗದನ್ನು ಕಳವು ಮಾಡಿಕೊಂಡಿ ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯದ 95.71ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ ಎಸ್.ನಾಯ್ಕ, ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸಕ್ಕಿದ್ದವನಿಂದಲೇ ಕೃತ್ಯದ ಶಂಕೆ

ಈ ವರ್ಕ್‌ಶಾಪ್‌ನಲ್ಲಿ ಸಾಂಗ್ಲಿಯ ವ್ಯಕ್ತಿಯೊಬ್ಬ ಕೆಲಸಕ್ಕೆ ಇದ್ದನು. ಆತ ಸುಮಾರು ಎರಡು ತಿಂಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದನು. ಅವನ ಕೈಯಲ್ಲಿ ವರ್ಕ್‌ಶಾಪ್ ಕೀ ಇತ್ತೆನ್ನಲಾಗಿದೆ. ಇದನ್ನೇ ನಕಲಿ ಮಾಡಿ ಇಟ್ಟುಕೊಂಡು ಆತ ಬೇರೆಯವರಿಂದ ಈ ಕೃತ್ಯ ಮಾಡಿಸಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ವರ್ಕ್‌ಶಾಪ್‌ನ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಈ ಕೃತ್ಯದಲ್ಲಿ ಇಬ್ಬರು ಮುಸುಕುಧಾರಿಗಳು ಇರುವುದು ಕಂಡುಬಂದಿದೆ. ಅದರಲ್ಲಿ ಒಬ್ಬಾತ ಮೊದಲಿಗೆ ಒಳಗೆ ಬಂದು ಒಳಗಿನ ಎರಡು ಸಿಸಿಟಿವಿ ಕ್ಯಾಮೆರಾಗಳಿಗೆ ಸ್ಪ್ರೇ ಹಾಕಿ ದೃಶ್ಯ ಕಾಣದಂತೆ ಮಾಡಿರುವುದು ಸೆರೆಯಾಗಿದೆ.

ಕಳ್ಳರು ಕಾರು ಮತ್ತು ಬೈಕಿನಲ್ಲಿ ಬಂದು ಈ ಕೃತ್ಯ ಎಸಗಿರುವ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News