ಕಾನೂನು ಕಲಿಕೆಯಿಂದ ವ್ಯಕ್ತಿತ್ವ ವಿಕಸನ: ನ್ಯಾ.ಎಂ.ಐ.ಅರುಣ್
ಉಡುಪಿ : ಕಾನೂನು ಒಂದು ಅದ್ಭುತವಾದ ವಿಷಯವಾಗಿದ್ದು, ಕಾನೂನು ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯ ದಲ್ಲಿ ಕಾನೂನುಗಳ ಉದ್ದೇಶಗಳು ಮತ್ತು ಗುರಿಯನ್ನು ತಿಳಿದುಕೊಳ್ಳಬೇಕು. ಹಾಗೂ ಅದಕ್ಕೆ ಅನುಗುಣವಾಗಿ ಕಾನೂನು ಉಪಬಂಧಗಳನ್ನು ಅರ್ಥೈಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಬೇಕುಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಾ ಧೀಶ ಹಾಗೂ ಉಡುಪಿ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ನ್ಯಾ. ಮರಳೂರು ಇಂದ್ರಕುಮಾರ್ ಅರುಣ್ ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾದ್ಯಾಲಯದಲ್ಲಿ ನಡೆದ ೬೪ನೇ ಕಾಲೇಜು ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು, ಕಾನೂನು ಕಲಿಕೆಯಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಾಗರಿಕರಿಗೆ ಮೂಲಭೂತ ಹಕ್ಕುಗಳ ಮಾಹಿತಿಯ ಜೊತೆಗೆ ಮೂಲಭೂತ ಕರ್ತವ್ಯಗಳ ಅರಿವು ಸಹ ಇರಬೇಕು ಎಂದು ಅವರು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್ ವಾರ್ಷಿಕ ವರದಿ ಮಂಡಿಸಿದರು. ದತ್ತಿ ಬಹುಮಾನಗಳ ಘೋಷಣೆಯನ್ನು ಪ್ರೊ.ಪ್ರೀತಿ ಹರೀಶ್ ರಾಜ್ ನಡೆಸಿಕೊಟ್ಟರು. ಒಟ್ಟು ೯ ಮಂದಿ ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ ಹಾಗೂ ದತ್ತಿ ಬಹುಮಾನ ವಿತರಿಸಲಾಯಿತು.
ಪ್ರೊ.ಸುರೇಖಾ ಕೆ. ಸ್ವಾಗತಿಸಿ, ಈರಪ್ಪ ಎಸ್. ಮೇದಾರ್ ವಂದಿಸಿದರು. ವಿದ್ಯಾರ್ಥಿನಿ ಕೋಯಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭ ದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್., ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರಕಾಶ್ ರಾವ್ ಡಿ, ಕಾಲೇಜಿನ ಶಿಕ್ಷಕ- ಪೋಷಕ ಸಂಘದ ಉಪಾಧ್ಯಕ್ಷ ಪ್ರೇಮ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಿತೇಶ್ ರಾಜ್ ಹಾಗೂ ಅಭಿನಯ ಆಚಾರ್ಯ ಉಪಸ್ಥಿತರಿದ್ದರು.