ಎಸ್‌ಐಆರ್ ಪ್ರಕ್ರಿಯೆ| ಡಿಜಿಟಲೀಕರಣದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿ.ಅನ್ಬುಕುಮಾರ್ ಶ್ಲಾಘನೆ
ಉಡುಪಿ, ಜು.25: ರಾಜ್ಯದಲ್ಲಿ ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) 2026ಕ್ಕೆ ಸಂಬಂಧಿಸಿ ದಂತೆ ಮತದಾರರಿಂದ ಪಡೆದುಕೊಂಡ ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಾದ ವಿ.ಅನ್ಬುಕುಮಾರ್ ಶ್ಲಾಘಿಸಿದ್ದಾರೆ.
ಶನಿವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
‘ಪ್ರಜಾಪ್ರಭುತ್ವದ ಅಡಿಪಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ದೋಷರಹಿತ ಹಾಗೂ ಯಾವುದೇ ಗೊಂದಲಗಳಿಗೆ ಅವಕಾಶ ನೀಡ ದಂತೆ ನಿರ್ವಹಿಸಿ ಗುಣಮಟ್ಟದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಮನೆಮನೆ ಸಮೀಕ್ಷೆಯ ನಮೂನೆಗಳಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದವರು ಸಹ ವೈಯಕ್ತಿಕ ವಿವರಗಳನ್ನು ಎನ್ಯುಮರೇಷನ್ ಫಾರ್ಮ್‌ನ ಕೊನೆಯ ಕಾಲಂ ನಲ್ಲಿ ವಿವರಗಳನ್ನು ಭರ್ತಿ ಮಾಡಿ, ಬಿಎಲ್‌ಓಗಳಿಗೆ ನೀಡಬಹುದಾಗಿದೆ ಎಂದರು.
ಒಂದೊಮ್ಮೆ ಬಿಎಲ್‌ಒಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಮನೆಯಲ್ಲಿ ಇಲ್ಲದಿದ್ದಲ್ಲಿ ಅವರ ಪರವಾಗಿ ಕುಟುಂಬದ ಯಾವುದೇ ಒಬ್ಬ ವಯಸ್ಕರು ಸಹಿ ಹಾಕಿ ಗಣತಿ ನಮೂನೆಗಳನ್ನು ಬಿಎಲ್‌ಒಗೆ ನೀಡಬಹು ದಾಗಿದೆ ಎಂದೂ ಅನ್ಬುಕುಮಾರ್ ತಿಳಿಸಿದರು. ಎನ್ಯುಮರೇಶನ್ ಫಾರಂಗಳ ಡಿಜಿಟಲೀಕರಣ ಕಾರ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶೇ.88.39 ಸಾಧನೆ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕ ರಣೆ (ಎಸ್‌ಐಆರ್-2026) ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯಲ್ಲಿ ಶೇ.100 ಪ್ರಗತಿ ಸಾಧಿಸಿದ್ದಾರೆ. ಇಂದು (ಜುಲೈ 25 ಸಂಜೆ 4ಗಂಟೆ) ಸಂಜೆವರೆಗೆ ಒಟ್ಟು 9,40,340 ಗಣತಿ ನಮೂನೆಯನ್ನು ಡಿಜಿಟಲೀಕರಣ ಗೊಳಿಸಿ ಶೇ. 88.39ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಮನೆಮನೆ ಭೇಟಿ ವೇಳೆ 14,835 ಮತದಾರರು ಮೃತಪಟ್ಟಿರುವುದು ಕಂಡುಬಂದಿದೆ. 14,426 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 5225 ಮತದಾರರು ಈಗಾಗಲೇ ತಮ್ಮ ಸ್ವದಾಖಲಾತಿ ಮಾಡಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಶೇ.100 ಸಾಧಕ ಬಿಎಲ್‌ಒಗಳಿಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯ ಎನ್ಯುಮರೇಷನ್ ಫಾರಂಗಳ ಡಿಜಿಟಲಿಕರಣ ಕಾರ್ಯದಲ್ಲಿ ಪ್ರಥಮವಾಗಿ ಶೇ.100 ಸಾಧನೆ ಮಾಡಿದ ಪ್ರತಿ ವಿಧಾನಸಭಾ ಕ್ಷೇತ್ರದ ಒಬ್ಬೊಬ್ಬ ಬಿಎಲ್‌ಒಗಳನ್ನು ಮುಖ್ಯ ಚುನಾವಣಾಧಿಕಾರಿ ಗಳು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
118-ಬೈಂದೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 125ರ ಬಿಎಲ್‌ಒ ಪವಿತ್ರ ಪೂಜಾರಿ, 119-ಕುಂದಾಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 135ರ ಲಕ್ಷ್ಮೀ ಶೆಡ್ತಿ, 120-ಉಡುಪಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 33ರ ಪ್ರಸನ್ನಿ, 121-ಕಾಪು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 190ರ ಹೇಮಾ ಪೂಜಾರ್ತಿ, 122-ಕಾರ್ಕಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 41ರ ಜ್ಯೋತಿರಾವ್ ಸೇರ್ವೆಗಾರ್ ಇವರಿಗೆ ವಿ.ಅನ್ಬುಕುಮಾರ್ ಅಭಿನಂದನಾ ಪತ್ರವನ್ನು ನೀಡಿದರು.