×
Ad

ಉಡುಪಿ | ಬೀಡಿ ಕಾರ್ಮಿಕರ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಆರಂಭ

Update: 2025-11-25 16:23 IST

ಉಡುಪಿ, ನ.25: ಬೀಡಿ ಕಾರ್ಮಿಕರ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ನಿರಾಕರಿಸಿದ ಬೀಡಿ ಮಾಲಕರ ವಿರುದ್ಧ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದಿನಿಂದ ಆರಂಭಿಸಿದರು.

ಧರಣಿಯನ್ನು ಉದ್ಘಾಟಿಸಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕರ್ನಾಟಕ ಸರಕಾರ ಬೀಡಿ ಕಾರ್ಮಿಕರಿಗೆ 2018 ಮತ್ತು 2024 ಕನಿಷ್ಠ ಕೂಲಿ ಪ್ರಕಟಣೆ ಮಾಡಿದರೂ, ಬೀಡಿ ಮಾಲಕರು ಬಡ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ಕೊಡದೇ ವಂಚಿಸಿದ್ದಾರೆ. ಬೀಡಿ ಕಾರ್ಮಿಕರು ಹಲವು ಬಾರಿ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ನೀಡಿದರೂ, ಸರ್ಕಾರ ಬೀಡಿ ಮಾಲಕರ ಮೇಲೆ ಕ್ರಮವಹಿಸಿಲ್ಲ. ಇದು ಮಾಲಕರು ಹಾಗೂ ಸರಕಾರ ಜಂಟಿಯಾಗಿ ಕಾರ್ಮಿಕರಿಗೆ ಮಾಡಿದ ದ್ರೋಹ ಎಂದು ಆರೋಪಿಸಿದರು.

ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ ತುಟ್ಟಿ ಭತ್ತೆ ಸೇರಿ 301.98ರೂ. ನೀಡಬೇಕು ಎಂದು ರಾಜ್ಯ ಸರ್ಕಾರ ನಿಗದಿಪಡಿಸಿದರೂ ಮಾಲಕರು ನೀಡಿಲ್ಲ. ಆದುದರಿಂದ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಸಂಘಟನೆ ಹಾಗೂ ಬೀಡಿ ಮಾಲಕರ ಜೊತೆ ಜಂಟಿ ಸಭೆ ನಡೆಸಿ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಮಾತನಾಡಿ, ಬೀಡಿ ಮಾಲಕರು ಸರಕಾರ ಮತ್ತು ಕಾನೂನಿಗಿಂತ ದೊಡ್ಡ ವ್ಯಕ್ತಿಗಳಾಗಿದ್ದರಿಂದಲೇ ಸರಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕರಾವಳಿ ಜಿಲ್ಲೆಗಳ ಶಾಸಕರು, ಜಿಲ್ಲಾಡಳಿತ ಬಡ ಬೀಡಿ ಕಾರ್ಮಿಕರ ಪರವಾಗಿ ನಿಲ್ಲದೇ ಮಾಲಿಕರ ಜೊತೆ ನಿಂತಿರುವುದರಿಂದಲೇ ಕಾರ್ಮಿಕರ ಬೆವರಿನ ಪಾಲಿನ ಕೂಲಿ ನಾಚಿಕೆಯಿಲ್ಲದೇ ಬಾಕಿ ಇರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹೋರಾತ್ರಿ ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಂಟಿ ಸಭೆ ಕರೆಯಲು ನ.28ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಸಹಸ್ರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.

ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಉಪಾಧ್ಯಕ್ಷ ಕೆ.ಶಂಕರ್, ಬೀಡಿ ಸಂಘಟನೆಯ ಮುಖಂಡರಾದ ಉಮೇಶ್ ಕುಂದರ್, ಬಲ್ಕೀಸ್, ನಳಿನಿ, ಸುನೀತಾ ಕಾರ್ಕಳ, ಮೋಹನ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News