ಉಡುಪಿ | ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ : ಶರ್ಮ
ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಧರಣಿ
ಉಡುಪಿ, ಡಿ.6: ಉಡುಪಿ ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಮ ಶರ್ಮಾ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಂದ ಸಹಾಯಧನ ರೂಪದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ಜಿಲ್ಲೆಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಇವುಗಳು ಯಾವುದಕ್ಕೂ ಹೆದರದೆ ಬೆಳೆಗಳನ್ನು ಹಾನಿ ಮಾಡುತ್ತಿದೆ. ಆದುದರಿಂದ ಸರಕಾರ ಈ ಬಗ್ಗೆ ಮಂಕಿ ಪಾರ್ಕ್, ಕಾಡು ಬೆಳೆಸಿ ಪ್ರಾಣಿಗಳು ನಾಡಿಗೆ ಬಾರದಂತೆ ಮಾಡುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನಾದಿ ಕಾಲದಿಂದ ಅನುಭವಿಸಿಕೊಂಡು ಬರುತ್ತಿರುವ ರೈತರ ಕುಮ್ಕಿ ಹಕ್ಕನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೆ ರೈತರಿಗೆ ನೀಡಬೇಕು. ಮುಂಗಾರು ಹಂಗಾಮಿನ ಭತ್ತವನ್ನು ಅಕ್ಟೋಬರ್ನಿಂದ ಪ್ರಾರಂಭಿಸಿ, ವರ್ಷಪೂರ್ತಿ ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಉಳಿದ ಬೆಳೆಗಳಿಗೂ ಬೆಂಬಲ ಬೆಲೆ ನೀಡುವ ಕ್ರಮಗಳನ್ನು ನಮ್ಮ ಜಿಲ್ಲೆಯಲ್ಲೂ ಆರಂಭಿಸಬೇಕು ಎಂದರು.
ಭತ್ತ ನಾಟಿ/ಕಟಾವು ಸಮಯದಲ್ಲಿ ಕೃಷಿಕರಿಗೆ ಯಂತ್ರೋಪಕರಣಗಳ ಕೊರತೆ ನೀಗಿಸಲು ಬೇರೆ ಜಿಲ್ಲೆಗಳ, ಯಂತ್ರಧಾರೆ ಯೋಜನೆ ಯಂತ್ರಗಳನ್ನು ನಿಗದಿತ ದರದಲ್ಲೇ ನಮ್ಮ ಜಿಲ್ಲೆಗೆ ತರಿಸುವ ವ್ಯವಸ್ಥೆಗಳಾಗಬೇಕು. ಬೆಳೆ ವಿಮೆ ನಿಯಮಗಳನ್ನು ಸರಳಗೊಳಿಸಬೇಕು ಮತ್ತು ಎಲ್ಲಾ ಬೆಳೆಗಳಿಗೂ ವಿಮೆಯನ್ನು ವಿಸ್ತರಿಸಬೇಕು. ಬೆಳೆವಿಮೆಯು ಬೆಲೆ ಹಾಗೂ ನಷ್ಟದ ಮೊತ್ತವನ್ನು ಒಳಗೊಂಡಿರಬೇಕು. ಕೃಷಿಕರಿಗೆ ಈಗ ನೀಡುತ್ತಿರುವ ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು.
ಕಿಂಡಿ ಅಣೆಕಟ್ಟು ನೀರಿನ ನಿರ್ವಹಣೆ, ಮದಗಗಳ ಹೂಳೆತ್ತುವುದು ಸಮರ್ಪಕವಾಗಿ ನಿರ್ದಿಷ್ಟ ಸಮಯದೊಳಗೆ ನಿರ್ವಹಿಸುವ ವ್ಯವಸ್ಥೆಗಳಾಗಬೇಕು. ಸರಕಾರ ನೀರಾವರಿ ಸಹಿತ ಯಾವುದೇ ಯೋಜನೆಗಳನ್ನು ರೂಪಿಸುವಾಗ ರೈತರೊಂದಿಗೆ ಸಮಾಲೋಚಿಸಿ ಜಾರಿಗೆ ತರಬೇಕು. ಜಿಲ್ಲೆಯಲ್ಲಿ ಹೊಳೆಗಳನ್ನು ಪುರಜ್ಜೀವನಗೊಳಿಸಿ ನೈಸರ್ಗಿಕ ಸ್ವಚ್ಛ ನೀರಿನ ಹೊಳೆ ಯಾಗಿಸಬೇಕು ಎಂದು ಅವರು ಒತ್ತಾಯಿಸಿದರು.
ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ನೀಡಲಾಯಿತು. ಮನವಿಯನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಸ್ವೀಕರಿಸಿದರು. ರೈತರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರಲಾಗುವುದು. ಅಪಘಾತ, ಅವಘಡಗಳಲ್ಲಿ ಮೃತಪಟ್ಟ ಎಲ್ಲ ಪ್ರಕರಣಗಳನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರ ಪರಿಹಾರ ನೀಡಲಾಗುವುದು ಎಂದರು.
ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಪ್ರಮುಖರಾದ ದಿನೇಶ್ ಶೆಟ್ಟಿ ಹೆರ್ಗ, ಶಶಿಧರ ರಾವ್ ಪೆರಂಪಳ್ಳಿ, ಸುಬ್ರಹ್ಮಣ್ಯ ಶ್ರಿಯಾನ್ ಪೆರಂಪಳ್ಳಿ, ರವೀಂದ್ರ ಪೂಜಾರಿ ಶಿಂಬ್ರಾ, ಚಂದ್ರ ಶೇಖರ್, ಭಾರತಿ ಶೆಟ್ಟಿ ಅಂಜಾರು, ಶಾಂತಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ ಆಗ್ರಹ :
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಆಗ್ರಹಿಸಿದರು.
ಕೃಷಿ ಅಪಘಾತ- ಅವಘಡಗಳಲ್ಲಿ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡಲು ಸಾಕಷ್ಟು ವಿಳಂಬ ಮಾಡಲಾಗುತ್ತಿದೆ. ಇದರಿಂದ ಕೃಷಿಕರ ಕುಟುಂಬ ಸಾಕಷ್ಟು ಸಮಸ್ಯೆ ಒಳಗಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಮೃತ ಕೃಷಿಕರ ಅವಲಂಬಿತರಿಗೆ ಶೀಘ್ರದಲ್ಲಿ ಪರಿಹಾರ ನೀಡುವಂತಾಗಬೇಕು ಎಂದರು.