ಉಡುಪಿ | ಡ್ರಗ್ಸ್ ಪೆಡ್ಲರ್‌ಗಳ ಕಣ್ಣು ಈಗ ಕರ್ನಾಟಕದತ್ತ : ಡಾ.ಭಗವಾನ್
ನಶಾ ಮುಕ್ತ ಭಾರತ, ಅಂಗಾಂಗ ದಾನ ಜಾಥಾ
ಉಡುಪಿ, ನ.29: ದೇಶದ ವಿದ್ಯಾರ್ಥಿ ಸಮುದಾಯದಲ್ಲಿ ಶೇ.30ರಷ್ಟು ಮಂದಿ ಮದ್ಯ, ತಂಬಾಕು, ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗುತ್ತಿದ್ದು, ಪಂಜಾಬ್, ಕೇರಳ, ಈಶಾನ್ಯ ರಾಜ್ಯದ ಬಳಿಕ ಡ್ರಗ್ಸ್ ಪೆಡ್ಲರ್‌ಗಳು ಕರ್ನಾಟಕವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಕುಲಪತಿ ಡಾ.ಭಗವಾನ್ ಹೇಳಿದ್ದಾರೆ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ (ಆರ್ಜಿಯುಎಚ್ಎಸ್), ಉಡುಪಿ ಜಿಲ್ಲಾ ಆರ್ಜಿಯುಎಚ್ಎಸ್ ಕಾಲೇಜು ಮ್ಯಾನೇಜ್ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಾಕಥಾನ್ ಹಾಗೂ ನಶಾಮುಕ್ತ ಭಾರತ, ಅಂಗದಾನ: ಜೀವನ ಸಂಜೀವಿನಿ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಪ್ರತಿ ವರ್ಷ 16,000ದಿಂದ 17,000 ಅಂಗಾಂಗ ಕಸಿ ಸಾಧ್ಯವಾಗುತ್ತಿದೆ. ಆದರೆ ಸದ್ಯ 2ರಿಂದ 3ಲಕ್ಷ ಅಂಗಾಂಗ ಕಸಿಗೆ ಬೇಡಿಕೆಯಿದೆ. ವರ್ಷಕ್ಕೆ 4ಲಕ್ಷ ಮಂದಿ ಅಂಗಾಂಗ ದಾನದ ಘೋಷಣೆ ಮಾಡಬೇಕು. ಆರೋಗ್ಯದ ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಜ್ಯೋತಿಯಂತೆ ಬೆಳಕಾಗಬೇಕು. ದೇಶಕ್ಕೆ ಹೊಸ ದಿಕ್ಕು ತೋರಬೇಕು ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಿತ್ಯ ಜೀವನ ನಶೆಯಿಂದ ಮುಕ್ತವಾಗಲು ಸಂಸ್ಕಾರ ಮುಖ್ಯವಿದ್ದು, ಇದು ನವ, ಆರೋಗ್ಯ ಯುತ ಭಾರತ ನಿರ್ಮಾಣಕ್ಕೆ ಪೂರಕ ಎಂದು ಹೇಳಿದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಾವು ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೆ ನೋಡುತ್ತಿದ್ದರೆ, ಪಾಶ್ಚಿಮಾತ್ಯ ರಾಷ್ಟ್ರಗಳು ಸಾಂಸ್ಕೃತಿಕ, ಸಾಂಸಾರಿಕ ವ್ಯವಸ್ಥೆಗಾಗಿ ಭಾರತದತ್ತ ನೋಡುತ್ತಿವೆ ಎಂದರು.
ಆರ್ಜಿಯುಎಚ್ಎಸ್ ಉಪಕುಲಪತಿ ಡಾ.ವಸಂತ ಶೆಟ್ಟಿ, ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಆರ್ಜಿಯು ಎಚ್ಎಸ್ ಸೆನೆಟ್/ಸಿಂಡಿಕೇಟ್ ಸದಸ್ಯರಾದ ಡಾ.ಶಿವಶರಣ್ ಎಸ್., ಡಾ.ಮಧುಸೂದನ್, ಡಾ.ಸಂಕನ್ಗೌಡ, ನಂದೀಶ್, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ಜಿಲ್ಲಾ ಕ್ರೀಡಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಎಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈಘಿ ಉಪಸ್ಥಿತರಿದ್ದರು. ಅರ್ಪಿತಾ ಶೆಟ್ಟಿ ನಿರೂಪಿಸಿ, ವಂದಿಸಿದರು.
ಅರಿವು ಜಾಥಾವು ಅಜ್ಜರಕಾಡು ಮೈದಾನದಿಂದ ಹೊರಟು ಜೋಡುಕಟ್ಟೆ, ಕೆನರಾ ಬ್ಯಾಂಕ್, ಕೆಥೋಲಿಕ್ ಸೆಂಟರ್ ಬಳಿಯಿಂದ ಎಡಕ್ಕೆ ತಿರುಗಿ ಮರಳಿ ಅಜ್ಜರಕಾಡು ಮೈದಾನದಲ್ಲಿ ಮುಕ್ತಾಯಗೊಂಡಿತು.