ಉಡುಪಿ | ಮುಂಬಡ್ತಿ ಹೊಂದಿದ ಮುಖ್ಯ ಗ್ರಂಥಾಲಯಾಧಿಕಾರಿಗೆ ಬೀಳ್ಕೊಡುಗೆ
ಉಡುಪಿ, ಡಿ.3: ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಸುಮಾರು ವರ್ಷಗಳ ಕಾಲ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಉಪನಿರ್ದೇಶಕರಾಗಿ ಶಿವಮೊಗ್ಗಕ್ಕೆ ಮುಂಬಡ್ತಿ ಪಡೆದ ನಳಿನಿ ಜಿ.ಐ. ಅವರಿಗೆ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಸೋಮವಾರ ಉಡುಪಿ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು.
ಅಭಿನಂದನೆ ಸ್ವೀಕರಿಸಿ ನಳಿನಿ ಜಿ.ಐ. ಮಾತನಾಡಿ, 18 ವರ್ಷಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಅದರಲ್ಲೂ ನನ್ನಾವಧಿಯಲ್ಲಿ ಸುಮಾರು 5.18 ಕೋಟಿ ವೆಚ್ಚದಲ್ಲಿ ಅಜ್ಜರಕಾಡು ಡಿಜಿಟಲ್ ಗ್ರಂಥಾಲಯ ನಿರ್ಮಾಣಗೊಂಡಿರುವುದು ವೃತ್ತಿ ಜೀವನದಲ್ಲಿಯೇ ಅತ್ಯಂತ ಖುಷಿಕೊಟ್ಟ ಸಂಗತಿ ಎಂದು ತಿಳಿಸಿದರು.
ಬೆಂಗಳೂರು ಗ್ರಂಥಾಲಯ ಇಲಾಖೆಯ ನಿವೃತ್ತ ಉಪನಿರ್ದೇಶಕ ವೆಂಕಟೇಶ್ ಸಿ.ಜೆ. ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯಾಧಿಕಾರಿ ವನಿತಾ ಕೆ. ಶುಭಾಶಂಸನೆಗೈದರು. ನಗರ ಕೇಂದ್ರ ಗ್ರಂಥಾಲಯದ ಪ್ರಭಾರ ಮುಖ್ಯ ಗ್ರಂಥಾಲಯ ಅಧಿಕಾರಿ ನಮಿತಾ ಬಿ. ಅಧ್ಯಕ್ಷತೆ ವಹಿಸಿದ್ದರು.
ಸರಕಾರಿ ನೌಕರರ ಸಂಘದ ನಿವೃತ್ತ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹಿರಿಯ ಉಪನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರು ಜಿಲ್ಲಾ ಖಜಾನೆ ಉಪನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ಉಡುಪಿ ನಗರ ಸಭೆ, ಉಡುಪಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ವಿವಿಧ ಶಾಖಾ ಸಿಬ್ಬಂದಿ, ಮೇಲ್ವಿಚಾರಕರು ಉಪಸ್ಥಿತರಿದ್ದರು.
ನಗರಕೇಂದ್ರ ಗ್ರಂಥಾಲಯದ ಪ್ರಥಮ ಧರ್ಜೆ ಸಹಾಯಕಿ ಶಕುಂತಳಾ ಕುಂದರ್ ಪರಿಚಯಿಸಿದರು. ನಗರಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ರಂಜಿತಾ ಸಿ. ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ವಂದಿಸಿದರು.
ಉಡುಪಿ ನಗರ ಕೇಂದ್ರ ಹಾಗೂ ಜಿಲ್ಲಾಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಒಟ್ಟು 18 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಳಿನಿ ಜಿ.ಐ. ಪ್ರಸ್ತುತ ಶಿವಮೊಗ್ಗಕ್ಕೆ ಜಿಲ್ಲಾ ಗ್ರಂಥಾಲಯಕ್ಕೆ ಉಪನಿರ್ದೇಶಕ ರಾಗಿ ಹಾಗೂ ಹಾಸನ ನಗರಕೇಂದ್ರ ಗ್ರಂಥಾಲಯಕ್ಕೆ ಹೆಚ್ಚುವರಿ ಸೇವೆ ಸಲ್ಲಿಸಲಿದ್ದಾರೆ.