×
Ad

ಉಡುಪಿ | ಬೆಳೆ ವಿಮಾ ಕಂಪನಿಯಿಂದ ರೈತರಿಗೆ ಮೋಸ : ಸಂಸದ ಕೋಟರಿಂದ ಕೃಷಿಸಚಿವರಿಗೆ ಮನವಿ

Update: 2025-12-04 20:03 IST

ಉಡುಪಿ, ಡಿ.4: ಕರ್ನಾಟಕ ರಾಜ್ಯದಲ್ಲಿ ಹವಾಮಾನಾಧಾರಿತ ಬೆಳೆ ವಿಮೆಯ ಸಮಸ್ಯೆಯಿಂದ ರೈತ ಸಂಕಷ್ಟದಲ್ಲಿದ್ದಾರೆ. ಅಡಿಕೆ, ಕಾಳುಮೆಣಸು, ಸೇರಿದಂತೆ ಹವಾಮಾನ ಆಧಾರಿತ ಬೆಳೆವಿಮೆಗೆ ರೈತರು ಹಣ ಪಾವತಿಸಿ ನೊಂದಾಯಿಸಿಕೊಂಡಿದ್ದು, ಈಗ ಬೆಳೆ ವಿಮೆ ಪಾವತಿಯಲ್ಲಿ ವಿಮಾ ಕಂಪನಿಗಳ ತಾರತಮ್ಯ ಮತ್ತು ಬೇಜವಾಬ್ದಾರಿಯಿಂದ ರೈತರಿಗೆ ನಷ್ಟವಾಗಿದೆ. ಹೀಗಾಗಿ ಕೇಂದ್ರ ಸರಕಾರ ತಕ್ಷಣ ರೈತರ ನೆರವಿಗೆ ಬರಬೇಕೆಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದಿರುವ ಸಂಸತ್ ಅಧಿವೇಶನದಲ್ಲಿ ಭಾಗವಹಿಸುತ್ತಿರುವ ಕೋಟ ಈ ಸಂದರ್ಭದಲ್ಲಿ ಕೃಷಿ ಮಂತ್ರಾಲಯದ ಕಚೇರಿಯಲ್ಲಿ ಕೃಷಿ ಸಚಿವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯತ್ ಗಳಲ್ಲೂ ಮಳೆಮಾಪಕಗಳನ್ನು ಅಳವಡಿಸಿದ್ದರೂ, ಅಸಮರ್ಪಕ ನಿರ್ವಹಣೆಯಿಂದ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಮಳೆ ದಾಖಲೆಗಳಲ್ಲೂ ಅನ್ಯಾಯವಾಗಿದೆ ಎಂದು ಸಂಸದ ಕೋಟ ಮನವಿಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 39,507 ಮಂದಿ ರೈತರು ಬೆಳೆ ವಿಮೆ ಪಾವತಿಸಿದ್ದರೂ ಕೇವಲ 9,000 ಮಂದಿಗಷ್ಟೇ ಅತ್ಯಂತ ಕಡಿಮೆ ಮೊತ್ತದ ಪರಿಹಾರ ಪಾವತಿಯಾಗಿದೆ. ಕೆಲವು ರೈತರ ಖಾತೆಗಳಿಗೆ ಕಟ್ಟಿದ ವಿಮಾ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ಬಂದಿದೆ ಎಂದು ಕೋಟ ಮನವಿಯಲ್ಲಿ ವಿವರಿಸಿದ್ದಾರೆ.

ವಿಮಾ ಕಂಪನಿ ರೈತರಿಗೆ ನ್ಯಾಯ ಕೊಡದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಯ ಮಾರ್ಗ ಹಿಡಿದಿದ್ದು, ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿಮಾ ವಂಚಿತ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಕೋಟ ಸಚಿವರಿಗೆ ಕೊಟ್ಟ ಮನವಿ ಪತ್ರದಲ್ಲಿ ತಿಳಿಸಿದ್ದು, ಮನವಿ ಸ್ವೀಕರಿಸಿದ ಸಚಿವರು ಕೂಡಲೇ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆಂದು ಸಂಸದ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News