ಉಡುಪಿ | ನ.30ರಂದು ರಾಜಾಂಗಣದಲ್ಲಿ ‘ಗೀತಾ ಭಜನೋತ್ಸವ’
ಉಡುಪಿ, ನ.29: ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ‘ಗೀತಾ ಮಾಸೋತ್ಸವ’ದ ಅಂಗವಾಗಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದೊಂದಿಗೆ ನ.30 ರವಿವಾರ ಬೆಳಗ್ಗೆ ಗಂಟೆ 9:30ರಿಂದ ಉಡುಪಿ ರಾಜಾಂಗಣದಲ್ಲಿ ‘ಗೀತಾ ಭಜನೋತ್ಸವ’ ಹಾಗೂ ಅಪರಾಹ್ನ 2:30ರಿಂದ ಜೋಡುಕಟ್ಟೆಯಿಂದ ರಾಜಾಂಗಣದವರೆಗೆ ‘ಕುಣಿತದ ಭಜನೋತ್ಸವ’ ನಡೆಯಲಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.
ನ.30ರ ಬೆಳಗ್ಗೆ ಗಂಟೆ 9:00ರಿಂದ ರಾಜಾಂಗಣದಲ್ಲಿ ‘ಸಾಮೂಹಿಕ ಗೀತಾ ಪಾರಾಯಣ’ ನಡೆಯಲಿದೆ. 10:00ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ‘ಗೀತಾ ಭಜನೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ.
ಅಪರಾಹ್ನ 2:00ರಿಂದ ರಾಜಾಂಗಣದಲ್ಲಿ ‘ಸಾಮೂಹಿಕ ಭಜನೆ’ಯ ಮೂಲಕ ‘ಗೀತಾ ಭಜನೋತ್ಸವ’ ನಡೆಯಲಿದೆ. 2:30ಕ್ಕೆ ಉಡುಪಿ ಜೋಡುಕಟ್ಟೆಯಿಂದ ಪ್ರಾರಂಭಗೊಳ್ಳುವ ಬೃಹತ್ ‘ಕುಣಿತದ ಭಜನೋತ್ಸವ’ ಕ್ಕೆ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಉಪಸ್ಥಿತಿಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದಾರೆ.
‘ಕುಣಿತದ ಭಜನೋತ್ಸವ’ದ ಮೆರವಣಿಗೆ ಕೆ.ಎಂ.ಮಾರ್ಗ, ತ್ರಿವೇಣಿ ಸರ್ಕಲ್ ಮಾರ್ಗವಾಗಿ ಸಂಸ್ಕೃತ ಕಾಲೇಜ್ ಬಳಿಯಿಂದ ರಥ ಬೀದಿ ಮೂಲಕ ರಾಜಾಂಗಣದಲ್ಲಿ ಸಮಾಪನಗೊಳ್ಳಲಿದೆ. ಸಂಜೆ 4:30ಕ್ಕೆ ಸಂತರು ಮತ್ತು ಗಣ್ಯರ ಸಮಾಗಮದೊಂದಿಗೆ ‘ಗೀತಾ ಭಜನೋತ್ಸವ’ದ ಸಮಾರೋಪ ನಡೆಯಲಿದೆ ಎಂದು ನಾಗರಾಜ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.