ಉಡುಪಿ | ಡಿ.1ರಂದು ಕೇಂದ್ರ ಸಚಿವರ ಮನೆ ಮುಂದೆ ಬಿಸಿಯೂಟ ನೌಕರರ ಧರಣಿ
ಸಾಂದರ್ಭಿಕ ಚಿತ್ರ
ಉಡುಪಿ, ನ.26: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಡಿ.1ರಂದು ಬೆಂಗಳೂರು, ತುಮಕೂರು, ಹುಬ್ಬಳ್ಳಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿರುವ ಕೇಂದ್ರ ಸಚಿವರ ಮನೆ ಮುಂದೆ ಬಿಸಿಯೂಟ ನೌಕರರು ಧರಣಿ ನಡೆಸಲು ಸಿಐಟಿಯು ತೀರ್ಮಾನಿಸಿದೆ.
2001ರಲ್ಲಿ ಬಂದ ಅಕ್ಷರ ದಾಸೋಹ ಯೋಜನೆಯಲ್ಲಿ ಇಂದು 11.8 ಕೋಟಿ ಫಲಾನುಭವಿಗಳಿದ್ದಾರೆ. ಕೇಂದ್ರ ಸರಕಾರ 2014ರಿಂದ ನೀತಿ ಆಯೋಗದ ಶಿಫಾರಸ್ಸಿನ ಮೇಲೆ ತನ್ನ ಪಾಲಿನ ವಂತಿಗೆಯನ್ನು ಶೇ.90 ರಿಂದ ಶೇ.60ಕ್ಕೆ ಇಳಿಸಿದೆ. ಇದರಿಂದಾಗಿ 26 ಲಕ್ಷ ಮಹಿಳೆಯರು ಅಡುಗೆ ತಯಾರಿಕೆ ಮಾಡುವವರಿಗೆ ಕೇಂದ್ರ ಸರಕಾರದ ಅನುದಾನ ಪ್ರಕಾರ ಕೇವಲ 600 ರೂ.ಗಳಿಗೆ ದುಡಿಸುವಂತೆ ಆಗಿದೆ. ಕೇಂದ್ರ ಸರಕಾರ ತನ್ನ ಪಾಲನ್ನು ಮೊದಲಿನಂತೆ ಶೇ.90 ನೀಡಿ ವೇತನ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಡಿ.1 ರಂದು ರಾಜ್ಯಾದ್ಯಂತ ಅಡುಗೆ ಬಂದ್ ಮಾಡಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಬೇಕು. ಅಡುಗೆ ಕುಟುಂಬದವರನ್ನು ರಕ್ಷಿಸಲು ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು ಎಂದು ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.