ಉಡುಪಿ |ದೀಪೇಶ್ ದೀಪಕ್ ಶೆಣೈಗೆ ‘ಹೊಯ್ಸಳ ಶೌರ್ಯ ಪ್ರಶಸ್ತಿ’
ಉಡುಪಿ, ನ.29: ಉಡುಪಿ ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ತಮ್ಮ ಚಾತುರ್ಯ, ಸಮಯಪ್ರಜ್ಞೆ ಮತ್ತು ಧೈರ್ಯಶಾಲಿ ಕಾರ್ಯಕ್ಕಾಗಿ ರಾಜ್ಯ ಮಟ್ಟದ ‘ಹೊಯ್ಸಳ ಶೌರ್ಯ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಶುಕ್ರವಾರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಐಸಿಡಿಎಸ್ ಗೋಲ್ಡನ್ ಜ್ಯೂಬಿಲಿ ಸಮಾರಂಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯ, ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರ ಪ್ರದರ್ಶಿಸುವ ಮಕ್ಕಳಿಗೆ ಪ್ರತಿವರ್ಷ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಗಳಲ್ಲಿ ಈ ಪ್ರಶಸ್ತಿ ಪಡೆದ ಮೊದಲ ವಿದ್ಯಾರ್ಥಿ ಇವರಾಗಿದ್ದಾರೆ. 2025-26ನೇ ಸಾಲಿನ ಪ್ರಶಸ್ತಿಯನ್ನು ದೀಪೇಶ್ ಪಡೆದಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಾಧನೆಗಾಗಿ ದೀಪೇಶ್ ಅವರನ್ನು ಶಾಲೆಯ ವ್ಯವಸ್ಥಾಪಕ ಮಂಡಳಿ, ಮುಖ್ಯೋಪಾಧ್ಯಾಯಿನಿ ವಿನೋದ ಶೆಟ್ಟಿ ಅವರು ಅಭಿನಂದಿಸಿದ್ದಾರೆ.