ಉಡುಪಿ | ಹೆಜ್ಜೆ-ಗೆಜ್ಜೆಯಿಂದ ರಾಷ್ಟ್ರಮಟ್ಟದ ನೃತ್ಯ, ಸಂಗೀತ ಸ್ಪರ್ಧೆ
ಉಡುಪಿ, ನ.25: ಮಣಿಪಾಲ- ಉಡುಪಿಯ ಹೆಜ್ಜೆ ಗೆಜ್ಜೆ ಫೌಂಡೇಶನ್ ಆಶ್ರಯದಲ್ಲಿ ರಾಷ್ಟ್ರಮಟ್ಟದ ಏಕವ್ಯಕ್ತಿ ಭರತನಾಟ್ಯ ಮತ್ತು ಸಂಗೀತ ಸ್ಪರ್ಧೆ ನ.30 ಹಾಗೂ ಡಿಸೆಂಬರ್ 7ರಂದು ನಡೆಯಲಿದೆ.
ದಾಸಪದ ವೈಭವಂ ಹೆಸರಿನಲ್ಲಿ ನಡೆಯುವ ಭಕ್ತಿ ನೃತ್ಯ ಸೌರಭ ಭರತನಾಟ್ಯ ಸ್ಪರ್ಧೆ ನ.30ರ ರವಿವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಹೆಜ್ಜೆ ಗೆಜ್ಜೆಯ ಸಹ ನಿರ್ದೇಶಕಿ ದೀಕ್ಷಾ ರಾಮಕೃಷ್ಣ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಿಜೇತರಿಗೆ ಫಲಕದೊಂದಿಗೆ 10,000 ರೂ.ನಗದು, ಎರಡನೇ ಬಹುಮಾನ ಪಡೆದವರಿಗೆ 7,000 ರೂ. ಹಾಗೂ ಮೂರನೇ ಬಹುಮಾನ ಪಡೆದವರಿಗೆ 5000 ರೂ. ನೀಡಲಾಗುವುದು. ಅಲ್ಲದೇ ಪ್ರಥಮ ಬಹುಮಾನ ವಿಜೇತರಿಗೆ ನೃತ್ಯದಾಸರತ್ನ ಬಿರುದು ನೀಡಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ನೃತ್ಯ ಸ್ಪರ್ಧಾರ್ಥಿಗೆ 10 ನಿಮಿಷಗಳ ಕಾಲಾವಕಾಶವಿರುತ್ತದೆ. ನೃತ್ಯಭಾಗ ಅಲರಿಪು, ಜತಿಸ್ವರ ಇತ್ಯಾದಿ ಮತ್ತು ಇನ್ನೊಂದು ದಾಸರ ಅಂಕಿತ ಇರುವ ದೇವರನಾಮ (ಅಭಿನಯ)ಕ್ಕೆ ನರ್ತಿಸಬೇಕಾಗುತ್ತದೆ ಎಂದು ದೀಕ್ಷಾ ರಾಮಕೃಷ್ಣ ತಿಳಿಸಿದರು.
ಡಿ.7ರ ರವಿವಾರ ಭಕ್ತಿ ಗಾನ ಲಹರಿ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆಯನ್ನು ಹೆಜ್ಜೆ ಗೆಜ್ಜೆ ಉಡುಪಿಯಲ್ಲಿ ನಡೆಸಲಾಗುವುದು. ಪ್ರತಿಯೊಬ್ಬರಿಗೆ 10 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಈ ಸ್ಪರ್ಧೆಯ ವಿಜೇತರಿಗೆ ಫಲಕದೊಂದಿಗೆ 10,000 ರೂ. ನಗದು ಬಹುಮಾನ, ಎರಡನೇ ಸ್ಥಾನಿಗೆ 7,000 ರೂ. ಹಾಗೂ ಮೂರನೇ ಸ್ಥಾನಿಗೆ 5000 ರೂ. ನಗದು ನೀಡಲಾಗುವುದು. ಅಗ್ರಸ್ಥಾನಿಗೆ ದಾಸಗಾನರತ್ನ ಪ್ರಶಸ್ತಿ ನೀಡಲಾಗುವುದು.
ಈ ಎರಡು ಸ್ಪರ್ಧೆಗಳಲ್ಲಿ 13ರಿಂದ 25 ವರ್ಷ ವಯೋಮಿತಿಯವರು ಮಾತ್ರ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹೆಜ್ಜೆ ಗೆಜ್ಜೆ ಉಡುಪಿ ದೂರವಾಣಿ ಸಂಖ್ಯೆ:9110814436ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೆಜ್ಜೆಗೆಜ್ಜೆಯ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಹಾಗೂ ರಂಜನಿ ಸಾಮಗ ಉಪಸ್ಥಿತರಿದ್ದರು.