×
Ad

ಸುಳ್ಳು ಸುದ್ದಿ ಹರಡಿದ ರಶ್ಮಿ ಸಾಮಂತ್ ವಿರುದ್ಧ ಕೇಸು ದಾಖಲಿಸದ ಉಡುಪಿ ಪೊಲೀಸ್

Update: 2023-07-26 16:29 IST

ರಶ್ಮಿ ಸಾಮಂತ್

ಉಡುಪಿ: ಜಿಲ್ಲೆಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಸ್ವಘೋಷಿತ ಹಿಂದೂ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ ಎಂದು ಉಡುಪಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಈಗಾಗಲೇ ಒನ್ ಇಂಡಿಯಾ ಸಂಸ್ಥೆ ಹಾಗೂ ಅದನ್ನು ಹಂಚಿಕೊಂಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಇದೇ ಪ್ರಕರಣದಲ್ಲಿ ತಪ್ಪು ಮಾಹಿತಿ ಹರಡಿದ ರಶ್ಮಿ ವಿರುದ್ಧ ಪ್ರಕರಣ ಯಾಕೆ ದಾಖಲಾಗಿಲ್ಲ  ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

ರಶ್ಮಿ ಸಾವಂತ್ ಅವರು ಮಾಡಿರುವ ಟ್ವೀಟ್ ಗಳನ್ನು ಉಡುಪಿ ಎಸ್ಪಿ ಅವರೇ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರೂ ಆಕೆಯ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ,

"ನೂರಾರು ಹಿಂದೂ ಹುಡುಗಿಯರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ತಮ್ಮ ಕಾಲೇಜಿನ ಮಹಿಳಾ ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದಾರೆ. ಚಿತ್ರೀಕರಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಮುಸ್ಲಿಂ ವಿದ್ಯಾರ್ಥಿನಿಯರು ಸಮುದಾಯದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿದ್ದಾರೆ” ಎಂದು ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದರು. ಆದರೆ, ಇವುಗಳನ್ನೆಲ್ಲಾ ಸ್ವತಃ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರೇ ತಳ್ಳಿ ಹಾಕಿದ್ದಾರೆ.

Full View

ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ, ಆರೋಪಿತ ವಿದ್ಯಾರ್ಥಿನಿಯರು ನಂತರ ವೀಡಿಯೊವನ್ನು ಅಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ಯಾರಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ ಅಥವಾ ಕಿರುಕುಳ ನೀಡಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ರೆಸ್ಟ್ ರೂಂನಲ್ಲಿ ಯಾವುದೇ ಹಿಡನ್ ಕ್ಯಾಮೆರಾಗಳನ್ನು ಇರಿಸಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಟ್ವೀಟ್ ಸಂಬಂಧ ಉಡುಪಿ ಪೊಲೀಸರು ರಶ್ಮಿ ಮನೆಗೆ ಭೇಟಿ ನೀಡಿದ್ದರು. ಇದಕ್ಕೆ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ ಆಕೆಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ನಂತರ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕೂಡ ರಶ್ಮಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಸಿ.ಟಿ. ರವಿ ಸಹಿತ ಹಲವು ಬಿಜೆಪಿ ಮುಖಂಡರು ಆಕೆಗೆ ಬೆಂಬಲ ಸೂಚಿಸಿದ್ದರು.

ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಹುಡುಗಿಯರು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ರಶ್ಮಿ ಸಾಮಂತ್ ಹೇಳಿದ್ದರು. ಆದರೆ, ಪೊಲೀಸ್‌ ವಿವರಣೆಯಲ್ಲಿ ಅಂತಹ ಯಾವುದೇ ವಿಷಯವನ್ನು ಉಲ್ಲೇಖಿಸಿಲ್ಲ. ಈ ಘಟನೆಯಲ್ಲಿ ಕೇವಲ ಒಬ್ಬ ಹುಡುಗಿಯನ್ನು ಮಾತ್ರ ಚಿತ್ರೀಕರಿಸಲಾಗಿದೆ. ಇದುವರೆಗಿನ ತನಿಖೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಂತೆ ಚಿತ್ರೀಕರಿಸಲ್ಪಟ್ಟ ಹುಡುಗಿಯ ವಿಡಿಯೋಗಳು ಎಲ್ಲಿಯೂ ವೈರಲ್‌ ಆಗಿಲ್ಲ ಎಂದು ತಿಳಿಸಿದ್ದಾರೆ.

ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಹೇಳಿಕೆಗಳನ್ನು ನಿರಾಕರಿಸಿದ್ದು, ಈ ಹಿಂದೆ ಕಾಲೇಜಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಆರೋಪಗಳೆಲ್ಲವೂ ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

ಈ ಹಿಂದೆ ಇಲ್ಲಿ ಇಂತಹ ಘಟನೆ ನಡೆದಿತ್ತು ಎಂಬುದು ಸುಳ್ಳು. ಸತ್ಯಾಸತ್ಯತೆಯನ್ನು ಅರಿಯದೆ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ಗೊಂದಲಮಯ ವಿಚಾರಗಳನ್ನು ಹಾಕಬಾರದು ಎಂದು ಅವರು ಹೇಳಿದ್ದಾರೆ.

Full View

ಉಡುಪಿ ಜಿಲ್ಲೆಯವರಾದ ರಶ್ಮಿ ಸಾಮಂತ್ ಅವರು ಈ ಹಿಂದೆಯೂ ತಮ್ಮ ಪೋಸ್ಟ್‌ಗಳಿಂದ ವಿವಾದಕ್ಕೆ ಗುರಿಯಾಗಿದ್ದರು. 2021 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ಅಲ್ಪಾವಧಿಯಲ್ಲೇ ಯೆಹೂದಿ ವಿರೋಧಿ, ಜನಾಂಗೀಯವಾದಿ ಮತ್ತು ಟ್ರಾನ್ಸ್‌ಫೋಬಿಕ್ ಪೋಸ್ಟ್‌ ಗಳನ್ನು ಮಾಡಿದ್ದು ಬಯಲಾಗಿತ್ತು. ಅದರ ಬೆನ್ನಲ್ಲೇ ಅವರು ಸಂಘದ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕಾಗಿತ್ತು.

ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಕೋಮು ಆಯಾಮ ನೀಡಲು ಪ್ರಯತ್ನಿಸಿದ ರಶ್ಮಿ ಸಾಮಂತ್‌ ವಿರುದ್ಧ ಕ್ರಮ ಕೈಗೊಳ್ಳಬೇಕೇಂಬ ಆಗ್ರಹ ಕೇಳಿ ಬಂದಿತ್ತು. ಆದರೆ ಪೊಲೀಸರು ಈವರೆಗೆ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News