×
Ad

ಉಡುಪಿ | ನೆರೆಹೊರೆಯವರೊಂದಿಗಿನ ಸಂಬಂಧ ವಿಶ್ವಾಸದ ಭಾಗ : ಮುಹಮ್ಮದ್ ಕುಂಞ

Update: 2025-11-30 20:54 IST

ಉಡುಪಿ, ನ.30: ನೆರೆಹೊರೆಯವರೊಂದಿಗಿನ ಸಂಬಂಧ ಎಂಬುವುದು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. ನೆರಮನೆಯವನು ನಿಮ್ಮಿಂದ ನಿರ್ಭಯದಿಂದ ಬದುಕುತ್ತಿಲ್ಲವೆಂದಾದರೆ ನೀವು ವಿಶ್ವಾಸಿಯಾಗಲು ಸಾಧ್ಯವಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿಯ ಜಾಮೀಯ ಮಸೀದಿಯಲ್ಲಿ ರವಿವಾರ ಆಯೋಜಿಸಲಾದ ನೆರಹೊರೆ ಹಕ್ಕುಗಳು ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮನುಷ್ಯ ಸಮಾಜಿಕ ಜೀವಿಯಾಗಿದ್ದು, ಯಾವಾಗಲೂ ಇತರರ ಮೇಲೆ ಅವಲಂಬಿತನಾಗಿದ್ದಾನೆ. ಮನುಷ್ಯನಷ್ಟು ಇತರರ ಮೇಲೆ ಅವಲಂಬಿತ ಜೀವಿ ಈ ಭೂಮಿಯಲ್ಲಿ ಇಲ್ಲ. ಬೇರೆಲ್ಲಾ ಪ್ರಾಣಿಗಳು ಹುಟ್ಟಿದ ಕೆಲವೇ ನಿಮಿಷ, ಗಂಟೆಯಲ್ಲಿ ನಡೆಯಲು, ಕೆಲಸ ಮಾಡಲು ಆರಂಭಿಸುತ್ತದೆ. ಆದರೆ ಮನುಷ್ಯ ಮಾತ್ರ ದೀರ್ಘಕಾಲದ ಪರಾವಲಂಬಿಯಾಗಿದ್ದಾನೆ. ಮನುಷ್ಯನಿಗೆ ಆ ಕಾರಣಕ್ಕಾಗಿ ಸಂಬಂಧಗಳ ತೀರಾ ಅಗತ್ಯವಿದೆ ಎಂದರು.

ಸಂಬಂಧಗಳು ದುರ್ಬಲವಾಗುತ್ತಿರುವ ಕಾಲ ಇದಾಗಿದೆ. ಈ ಆಧುನಿಕ ಭೌತಿಕ ಕಾಲದಲ್ಲಿ ನಾನು, ನನ್ನದು ಎಂಬುವುದರ ಆಚೆ ಬದುಕಿಗೆ ಯಾವುದೆ ಅಜೆಂಡಾ ಇಲ್ಲದೆ ಬದುಕುತ್ತಿದ್ದೇವೆ. ಆದರೆ ಇಸ್ಲಾಮ್ ಧರ್ಮ ಎಲ್ಲ ಕಾಲದಲ್ಲೂ ನಾವು ಎಂಬುವುದನ್ನು ಕಲಿಸಿಕೊಟ್ಟಿದೆ. ಸಾಮಾಜಿಕ ಜಾಲ ತಾಣದ ಈ ಕಾಲಘಟ್ಟದಲ್ಲಿ ನಮಗೆ ಎಲ್ಲೆಲ್ಲಿ ಜನರ ಸಂಪರ್ಕವಿದೆ. ಆದರೆ ನೆರಹೊರೆಯ ಕುರಿತು ಪರಿಚಯವಿಲ್ಲದ, ಅವರ ನೋವುಗಳನ್ನು ಅರ್ಥೈಸದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದ ಕುರಿತು ಅತೀ ಹೆಚ್ಚು ಇಸ್ಲಾಮಫೋಬಿಯಾ ಹರಡಲಾಗುತ್ತದೆ. ಸುಳ್ಳುಸುದ್ದಿಗಳು, ತಪ್ಪು ಮಾಹಿತಿಗಳನ್ನು ಹರಡಲಾಗುತ್ತದೆ. ಮುಸ್ಲಿಂ ಸಮುದಾಯದ ವರ್ಚಸ್ಸಿಗೆ ಧಕ್ಕೆ ತರಲು ಹಲವು ವರ್ಷಗಳಿಂದ ಕೆಲವರು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಇಂದು ಕೂಡ ಈ ದೇಶದ ಬಹುಸಂಖ್ಯಾತ ಜನ ಮುಸ್ಲಿಮರನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಮುಸ್ಲಿಮರಲ್ಲಿನ ಸಂಸ್ಕಾರ. ಇಸ್ಲಾಮಿನ ಉದಾತ್ತವಾದ ಮಾನವೀಯ ಮೌಲ್ಯಗಳು ಎಂದರು.

ಎಸ್ಐಓನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಶ್ಫಾಕ್ ಶರೀಫ್ ಮಂಗಳೂರು ಮಾತನಾಡಿದರು. ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ನಿಹಾಲ್ ಕಿದಿಯೂರು ಉಪಸ್ಥಿತರಿದ್ದರು. ನಿಸಾರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಆಯಾನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News