×
Ad

ಉಡುಪಿ | ಕೇಂದ್ರದ ಕಾರ್ಮಿಕ ಸಂಹಿತೆ ಕಾರ್ಮಿಕ ವಿರೋಧಿಯಾಗಿದೆ : ವೇಣುಗೋಪಾಲ್

ವಿಮಾ ನೌಕರರ ಸಂಘ ಉಡುಪಿ ವಿಭಾಗೀಯ ಸಮ್ಮೇಳನ ಉದ್ಘಾಟನೆ

Update: 2025-11-24 16:36 IST

ಉಡುಪಿ, ನ.24: ಸರಕಾರವು ಇತ್ತೀಚೆಗೆ ನಾಲ್ಕು ಕಾರ್ಮಿಕ ಸಂಹಿತೆಯನ್ನು ಅನುಮೋದಿಸಿದ್ದು, ಸರಕಾರದ ಈ ನಡೆಯು ಕಾರ್ಮಿಕ ವಿರೋಧಿಯಾಗಿದೆ. ಇದರ ವಿರುದ್ಧ ದೇಶದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಸರಕಾರವು ಪ್ರಸ್ತಾಪಿಸಿದ ಶ್ರಮ ಶಕ್ತಿ ನೀತಿಯ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘ(ಎ.ಐ.ಐ.ಇ.ಎ)ದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ್ ಹೇಳಿದ್ದಾರೆ.

ಉಡುಪಿ ಎಲ್.ಐ.ಸಿ. ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಲಾದ ವಿಮಾ ನೌಕರರ ಸಂಘ ಉಡುಪಿ ವಿಭಾಗದ 67ನೇ ವಾರ್ಷಿಕ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಮಾ ಪ್ರತಿನಿಧಿಗಳು ಎಲ್‌ಐಸಿಯ ಜೊತೆ ಇನ್ನೆರಡು ಖಾಸಗಿ ವಿಮಾ ಸಂಸ್ಥೆಗಳಿಗೆ ವ್ಯವಹಾರ ನೀಡಲು ಅವಕಾಶ ಕಲ್ಪಿಸುವ ವಿಮಾ ನಿಯಂತ್ರಣ ಪ್ರಾಧಿಕಾರದ ಪರಿಷ್ಕೃತ ಮಸೂದೆಯನ್ನು ವಿರೋಧಿಸಲಾಗುತ್ತದೆ. ಸರಕಾರದ ಈ ಪ್ರಸ್ತಾವನೆಯು ಖಾಸಗಿ ರಂಗದ ಪರವಾಗಿದ್ದು, ಇದು ಎಲ್.ಐ.ಸಿ ಮತ್ತು 14,76,000 ವಿಮಾ ಪ್ರತಿನಿಧಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸರಕಾರವು ಸಾಂಧಾನಿಕ ಹಕ್ಕು ಮತ್ತು ಭದ್ರತೆಯನ್ನು ನಿರಾಕರಿಸುತ್ತಿರುವ ಈ ಸನ್ನಿವೇಶದಲ್ಲಿ ಕಾರ್ಮಿಕರ ಐಕ್ಯತೆ ಮತ್ತು ಹೋರಾಟದ ಕಿಚ್ಚನ್ನು ಬಲಪಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಮಾತನಾಡಿ, ಕಾರ್ಮಿಕರಿಗೆ ಪಿಂಚಣಿಯನ್ನು ನಿರಾಕರಿಸುವ ಸರಕಾರದ ನೀತಿಗಳು ಮತ್ತು ಸಾರ್ವಜನಿಕ ರಂಗದ ಎಲ್‌ಐಸಿಯನ್ನು ಲೂಟಿ ಹೊಡೆಯುತ್ತಿರುವ ಸರಕಾರದ ನಡೆಗಳ ಬಗ್ಗೆ ಪ್ರಸ್ತಾಪಿಸಿ ಈ ನೀತಿಗಳ ವಿರುದ್ಧ ಕಾರ್ಮಿಕ ವರ್ಗ ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಿ ಹೋರಾಟ ನಡೆಸಬೇಕು ಎಂದರು.

ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷ ಎಂ.ರವಿ ಮಾತನಾಡಿ, ಪ್ರಚಲಿತ ವಿದ್ಯಮಾನಗಳಲ್ಲಿ ಅಮೆರಿಕದ ಟ್ರಂಪ್ ಆಡಳಿತವು ಒಳಗೊಂಡಂತೆ ಅಂತರರಾಷ್ಟ್ರೀಯ ಬಂಡವಾಳ ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ವ್ಯವಸ್ಥಿತವಾಗಿ ಹಾಳುಗೆಡವುತ್ತಿವೆ. ಭಾರತದ ಉತ್ಪನ್ನಗಳಿಗೆ ಶೇ.25 ಹೆಚ್ಚಳ ಸುಂಕ ವಿಧಿಸುವ ಟ್ರಂಪ್ ಸರಕಾರವು ಭಾರತದ ಆಮದು ಮತ್ತು ರಪ್ತು ನೀತಿಗಳನ್ನು ತನ್ನ ಇಷ್ಟದಂತೆ ನಿಯಂತ್ರಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ನಮ್ಮ ಸರಕಾರವೂ ಏನೂ ಅಗಿಲ್ಲವೆನ್ನುವಂತೆ ವರ್ತಿಸುತ್ತಿದೆ ಎಂದರು.

ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜಿ.ತಿರುಪತಯ್ಯ ಮಾತನಾಡಿ, ಫ್ಯಾಶಿಸಂ ಅನ್ನು ಪೋಷಿಸುತ್ತಿರುವ ಸರಕಾರವು ಇಂದು ಅಲ್ಪಸಂಖ್ಯಾತರ ಹಕ್ಕು ಮತ್ತು ರಕ್ಷಣೆಯ ಜವಾಬ್ಧಾರಿಯನ್ನು ನಿರ್ವಸುವಲ್ಲಿ ವಿಫಲವಾಗಿದೆ. ಸರಕಾರವು ಮಂಡಿಸಿದ ವಿನಾಶಕಾರಿ ಕಾರ್ಮಿಕ ನೀತಿಗಳು ಕಾರ್ಮಿಕರ ಅಸ್ತಿತ್ವವನ್ನೇ ಕೆಣಕುವಂತಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳಿಗೆ ಕೊಡಲಿಯೇಟು ಬೀಳುವಂತಾಗಿದೆ. ಈ ನೀತಿಗಳ ವಿರುದ್ಧ ಎಲ್ಲಾ ಔದ್ಯೋಗಿಕ ಕ್ಷೇತ್ರಗಳ ಕಾರ್ಮಿಕರು ಒಗ್ಗಟ್ಟಾಗಿ ನಿರಂತರ ಹೋರಾಟಗಳ ಮೂಲಕ ಸರಕಾರವನ್ನು ಒತ್ತಾಯಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಅಧ್ಯಕ್ಷ ಪ್ರಭಾಕರ ಬಿ.ಕುಂದರ್ ವಹಿಸಿದ್ದರು. ಭಾರತೀಯ ಜೀವ ವಿಮಾ ನಿಗಮ, ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್.ಭಟ್, ಕಾರ್ಮಿಕ ಮತ್ತು ಔದ್ಯೋಗಿಕ ಸಂಬಂಧ ಪ್ರಬಂಧಕ ಎಂ.ಲಕ್ಷ್ಮೀನಾರಾಯಣ, ವಿಮಾ ನಿಗಮ ಉದ್ಯೋಗಿಗಳ ಸಂಘ, ಬೆಂಗಳೂರು 1ರ ಕೋಶಾಧಿಕಾರಿ ಭಾರತಿ ದೇಶಪಾಂಡೆ, ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ವಿಠಲ್‌ಮೂರ್ತಿ ಆಚಾರ್ಯ, ಎಲ್‌ಐಸಿ ಅಧಿಕಾರಿಗಳ ಸಂಘ ಉಡುಪಿ ವಿಭಾಗದ ಪದಾಧಿಕಾರಿ ಕುಶಾಲ್ ಕುಮಾರ್ ಇವರು ಮಾತನಾಡಿದರು.

2025-26ರ ಸಾಲಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿರ್ಮಲ, ಉಪಾಧ್ಯಕ್ಷರಾಗಿ ಪ್ರಭಾಕರ ಬಿ.ಕುಂದರ್ ಮತ್ತು ಉಪೇಂದ್ರ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿಶ್ವನಾಥ, ಜೊತೆ ಕಾರ್ಯದರ್ಶಿ ಗಳಾಗಿ ಶ್ರೀಪಾದ ಹೆರ್ಳೆ ಪಿ. ಮತ್ತು ದಿನೇಶ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಕವಿತಾ ಎಸ್. ಹಾಗೂ ಉಪಕೋಶಾಧಿಕಾರಿಯಾಗಿ ಗಣೇಶ್, ಪ್ರಾದೇಶಿಕ ಕಾರ್ಯದರ್ಶಿಗಳಾಗಿ ಮಂಗಳೂರಿನ ಆಲ್ಬನ್ ಮಸ್ಕರೇನಸ್, ರಾಧಿಕಾ ಎಲ್.ಕಾಮತ್ ಮತ್ತು ಕಡೂರಿನ ಕೆ.ಎನ್. ಉಮೇಶ್ ಆಯ್ಕೆಯಾದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಕವಿತಾ ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News