ಉಡುಪಿ | ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವಂತೆ ವೆಲ್ಫೇರ್ ಪಾರ್ಟಿಯಿಂದ ಮುಖ್ಯಮಂತ್ರಿಗೆ ಮನವಿ
ಉಡುಪಿ: ಜನ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ, 2021 (ಮತಾಂತರ ನಿಷೇಧ ಕಾಯ್ದೆ) ಇದರ ನೆಪವನ್ನು ಇಟ್ಟುಕೊಂಡು ಕೋಮುವಾದಿಗಳು ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾರೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಯಾವುದೇ ಒತ್ತಡವಿಲ್ಲದೆ, ತಮಗೆ ಬೇಕಾದ ಧರ್ಮವನ್ನು ಒಪ್ಪಿ, ಆ ಪ್ರಕಾರ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಆದರೆ ಈ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ ಮತ್ತು ಇದು ಸಂಘ ಪರಿವಾರದ ಕೋಮು ಅಜೆಂಡಾದ ಭಾಗವಾಗಿದೆ.
2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಇಂತಹ ಕರಾಳ ಮತ್ತು ಜನವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಸ್ಪಷ್ಟವಾದ ಆಶ್ವಾಸನೆಯನ್ನು ನೀಡಿತ್ತು. ಆದ್ದರಿಂದ, ಪ್ರಸ್ತುತ ಸರಕಾರವು ತನ್ನ ಭರವಸೆಯನ್ನು ಈಡೇರಿಸುವ ತುರ್ತು ಅವಶ್ಯಕತೆಯಿದೆ.
ಕಳೆದ ಸರಕಾರವು ರದ್ದುಪಡಿಸಿದ ಶೇ.4 ಮುಸ್ಲಿಂ ಮೀಸಲಾತಿಯನ್ನು ತಕ್ಷಣವೇ ಮರುಸ್ಥಾಪಿಸಬೇಕು. ಇದು ಮುಸ್ಲಿಂ ಸಮುದಾಯದ ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ, ಉದ್ಯೋಗದಲ್ಲಿ ಸಮಾನ ಅವಕಾಶವನ್ನು ಖಾತರಿಪಡಿಸಲು ಅತ್ಯವಶ್ಯಕವಾಗಿದೆ.
ಕಳೆದ ಬಿಜೆಪಿ ಸರಕಾರವು ಜಾರಿಗೆ ತಂದ ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ, 2021 ಮತ್ತು ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ, 2021 ಅತಿ ವಿವಾದಿತ, ಕೋಮು ಪ್ರಚೋದಿತ ಮತ್ತು ಸಂವಿಧಾನ ವಿರೋಧಿ ಕಾನೂನುಗಳಾಗಿವೆ.
ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆಯ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಭಯದ ವಾತಾವರಣ ಉಂಟಾಗಿದೆ. ಗೋ ಸಾಗಾಣಿಕದಾರರ ಮೇಲೆ ಪೊಲೀಸರಿಂದ ಶೂಟೌಟ್, ಮನೆ-ಮುಗ್ಗಟ್ಟುಗಳ ಜಪ್ತಿ ಮುಂತಾದ ಕಳವಳಕಾರಿ ಘಟನೆಗಳು ನಡೆದಿರುವುದು ಆತಂಕಕಾರಿಯಾಗಿದೆ.ಈ ಕರಾಳ ಕಾನೂನಿನಿಂದಾಗಿ ರೈತರು ತಾವು ಬೆಳೆಸಿದ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ತಮ್ಮ ನೆಚ್ಚಿನ ಕೃಷಿಯಾದ ಜಾನುವಾರು ಸಾಕಾಣಿಕೆಯನ್ನು ಮುಂದುವರೆಸಲಾಗದೆ ಕಂಗಾಲಾಗಿದ್ದಾರೆ. ಇದು ರೈತ ಸಮುದಾಯಕ್ಕೆ ಅನ್ಯಾಯವನ್ನುಂಟು ಮಾಡಿದೆ.
ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ರಾಜ್ಯದಲ್ಲಿ ರೈತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಎಲ್ಲ ನಾಗರಿಕರಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಇದ್ರೀಸ್ ಹೂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಶಹಜಹಾನ್ ತೋನ್ಸೆ ,ಅಫ್ವಾನ್ ಹೂಡೆ, ಝಕ್ರಿಯಾ ಉಪಸ್ದಿತರಿದ್ದರು