ಭಟ್ಕಳ| ವಿಪತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದ ಎನ್‌ಡಿಆರ್‌ಎಫ್ ತಂಡ
ಭಟ್ಕಳ: ವಿಪತ್ತು ಸಂಭವಿಸಿದ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದು ಹಾಗೂ ತುರ್ತು ಪರಿಸ್ಥಿತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 10ನೇ ಬ್ಯಾಟಾಲಿಯನ್ ವತಿಯಿಂದ ಜಾಗೃತಿ ಕಾರ್ಯಕ್ರಮ ಹಾಗೂ ಅಣಕು ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಎನ್‌ಡಿಆರ್‌ಎಫ್ ರೆಸ್ಕ್ಯೂರ್ ದೇವರಾಜ್ ಇಕೇರಿ ಮಾತನಾಡಿ, “ಪ್ರಾಕೃತಿಕ ವಿಕೋಪಗಳು, ರಸ್ತೆ ಅಪಘಾತಗಳು, ಸಿಡಿಲು ಬಡಿತ ಸೇರಿದಂತೆ ವಿವಿಧ ಅನಾಹುತಗಳ ಸಂದರ್ಭಗಳಲ್ಲಿ ಜನರು ತಾವೇ ರಕ್ಷಿಸಿಕೊಳ್ಳುವ ಕುರಿತು ಮೂಲಭೂತ ಜ್ಞಾನ ಹೊಂದಿರುವುದು ಅಗತ್ಯ. ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ” ಎಂದು ಹೇಳಿದರು.
ಅಣಕು ಪ್ರದರ್ಶನದಲ್ಲಿ ಪ್ರವಾಹ, ಸುನಾಮಿ, ಭೂಕಂಪ ಸೇರಿದಂತೆ ವಿವಿಧ ಅನಾಹುತಗಳಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣೆ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಹೃದಯಾಘಾತದ ಸಂದರ್ಭಗಳಲ್ಲಿ ನೀಡಬಹು ದಾದ ಪ್ರಾಥಮಿಕ ಚಿಕಿತ್ಸೆಯ ಪ್ರಾತ್ಯಕ್ಷಿಕೆಯನ್ನೂ ತಂಡ ಪ್ರದರ್ಶಿಸಿತು.
ಈ ಸಂದರ್ಭ ಎನ್‌ಡಿಆರ್‌ಎಫ್ ತಂಡದ ಮೇಜರ್ ದುರ್ಗ ಪ್ರಸಾದ್, ಕಮಾಂಡರ್ ಕೃಷ್ಣಕುಮಾರ್, ಸಜೀವನ್, ಕುಮಾರ್ ಜಿ.ಎನ್., ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರವಣಕುಮಾರ, ಮುಟ್ಟಳ್ಳಿ ಗ್ರಾಮ ಪಂಚಾಯತ್ ಪ್ರಭಾರಿ ಪಿಡಿಒ ಚಂದ್ರಶೇಖರ ಇಟಗಿ, ಕಾರ್ಯದರ್ಶಿ ಮಂಜು ನಾಥ ಶೆಟ್ಟಿ ಮನೆ, ಕಂದಾಯ ನಿರೀಕ್ಷಕ ವಿಶ್ವನಾಥ ಗಾಂಕರ, ಗ್ರಾಮ ಆಡಳಿತಾಧಿಕಾರಿ ಸಭಾನ ಬಾನು, ಮಾಜಿ ಪಂಚಾಯತ್ ಸದಸ್ಯ ಶೇಷಗಿರಿ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.