×
Ad

ದಾನಿಗಳ ಸಹಕಾರದಿಂದ ಭಟ್ಕಳ ತಾಲೂಕು ಆಸ್ಪತ್ರೆಗೆ ಹೊಸ ಮೆರಗು: ಡಾ. ಸವಿತಾ ಕಾಮತ

Update: 2026-07-01 19:04 IST

ಭಟ್ಕಳ: "ಮನೆಯಲ್ಲಿ ಹೆಣ್ಣುಮಕ್ಕಳು ಹೆಚ್ಚು ಶಿಸ್ತು ಪಾಲಿಸುತ್ತಾರೆ. ಮದುವೆಯಾಗಿ ತಮ್ಮ ಮನೆ ಮತ್ತು ಕುಟುಂಬ ವನ್ನು ಬಿಟ್ಟು ಹೋದರೂ, ಹುಟ್ಟಿದ ಮನೆ ಹಾಗೂ ಅಣ್ಣ-ತಮ್ಮಂದಿರು ಚೆನ್ನಾಗಿರಲಿ ಎಂದು ಸದಾ ಹಾರೈಸುತ್ತಾರೆ. ಅದೇ ರೀತಿ ನಾನು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಯಾಗಿದ್ದೇನೆ. ಇಲ್ಲಿ ನಾನು ಹಚ್ಚಿದ ಅಭಿವೃದ್ಧಿಯ ದೀಪ ಹೀಗೆ ಸದಾ ಪ್ರಜ್ವಲಿಸುತ್ತಿರಲಿ ಎಂಬುದು ನನ್ನ ಆಶಯ" ಎಂದು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಡಾ. ಸವಿತಾ ಕಾಮತ ಹೇಳಿದರು.

ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ನೂತನ ವೈದ್ಯರಿಗೆ ಸ್ವಾಗತ ಹಾಗೂ ವರ್ಗಾವಣೆ ಗೊಂಡ ವೈದ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕು ಆಸ್ಪತ್ರೆಯ ಅಭಿವೃದ್ಧಿಗೆ ಅನೇಕ ದಾನಿಗಳು ಸಹಕಾರ ನೀಡಿದ್ದು, ತಮ್ಮ ಮೇಲಿಟ್ಟ ವಿಶ್ವಾಸದಿಂದ ಅವರು ನೆರವಾಗಿದ್ದಾರೆ. ಅವರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದಾನಿಗಳ ಸಹಕಾರದಿಂದ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಮೆರಗು ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

ಭಟ್ಕಳ ಆಸ್ಪತ್ರೆಗೆ ಹಿರಿಯ ತಜ್ಞ ವೈದ್ಯರಾದ ಡಾ. ರಾಬರ್ಟ್ ರೆಬೆಲ್ಲೊ ಆಗಮಿಸಿರುವುದು ಸಂತಸದ ಸಂಗತಿ. ಅವರ ಮಾರ್ಗದರ್ಶನದಲ್ಲಿ ಆಸ್ಪತ್ರೆ ಇನ್ನಷ್ಟು ಅಭಿವೃದ್ಧಿಯಾಗುವ ವಿಶ್ವಾಸವಿದೆ. ಸಂಸ್ಥೆ ವ್ಯಕ್ತಿಗಿಂತ ದೊಡ್ಡದು. ಅದರ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ವೈದ್ಯರು, ಸಿಬ್ಬಂದಿ, ದಾನಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ತಜ್ಞ ವೈದ್ಯರಾದ ಡಾ. ಲಕ್ಷೀಶ, ಡಾ. ಸತೀಶ ಬಿ., ಡಾ. ಕಮಲಾ ನಾಯಕ ಹಾಗೂ ಶುಶ್ರೂಷಕಿಯರಾದ ಅಮೃತಾ ಎಂ., ಅರ್ಚನಾ ಭಂಡಾರ್ಕರ್ ಮತ್ತು ಅನಸೂಯಾ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಅದೇ ಸಂದರ್ಭದಲ್ಲಿ ನೂತನವಾಗಿ ನೇಮಕಗೊಂಡ ವೈದ್ಯರಾದ ಡಾ. ರಾಬರ್ಟ್ ರೆಬೆಲ್ಲೊ, ಡಾ. ಪ್ರಕಾಶ ನಾಯ್ಕ, ಡಾ. ಅನುರಾಧ ನಾಯಕ ಹಾಗೂ ಡಾ. ಸುಮಲತಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ. ಅರುಣ ನಾಯ್ಕ ವಹಿಸಿದ್ದರು. ಸ್ಥಳೀಯ ದಾನಿಗಳು, ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News