ಭಟ್ಕಳ: ಮೂಡುಭಟ್ಕಳ, ಮುಟ್ಟಳ್ಳಿಯಲ್ಲಿ ಸಿಸಿಟಿವಿ ಕಾವಲು
ಭಟ್ಕಳ: ಸಾರ್ವಜನಿಕರ ರಕ್ಷಣೆ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮೂಡುಭಟ್ಕಳ ಮತ್ತು ಮುಟ್ಟಳ್ಳಿ ಭಾಗದ ಮೂರು ಪ್ರಮುಖ ಕಡೆಗಳಲ್ಲಿ ‘ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ವತಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಪೋಲಿಸ್ ಇಲಾಖೆಗೆ ಹಸ್ತಾಂತರಿಸುವ ಮೂಲಕ ಪ್ರಶಂಸನೀಯ ಕಾರ್ಯ ಕೈಗೊಳ್ಳಲಾಗಿದೆ.
ಮೂಡುಭಟ್ಕಳ ಬೈಪಾಸ್, ಮೂಡುಭಟ್ಕಳ ಹೆಬ್ಬಾಗಿಲು ಕ್ರಾಸ್ ಹಾಗೂ ಮುಟ್ಟಳ್ಳಿ ರೈಲ್ವೇ ಸ್ಟೇಷನ್ ಕ್ರಾಸ್‌ಗಳಲ್ಲಿ ಈ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ನಗರ ಠಾಣೆಯ ಪಿಎಸೈ ನವೀನ ನಾಯ್ಕ ಅವರು ಸಿಸಿಟಿವಿ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಿಎಸೈ ನವೀನ ನಾಯ್ಕ, "ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿರುವುದು ಶ್ಲಾಘನೀಯ. ಯಾವುದೇ ಅಪರಾಧ ಸಂಭವಿಸಿದಾಗ ಆರೋಪಿಗಳ ಸುಳಿವು ಪತ್ತೆ ಹಚ್ಚಲು ಮತ್ತು ತನಿಖೆಗೆ ಸಿಸಿಟಿವಿ ದೃಶ್ಯಾವಳಿಗಳು ಪ್ರಮುಖ ಸಾಕ್ಷಿಯಾಗುತ್ತವೆ. ಪೋಲಿಸ್ ಇಲಾಖೆಯ ಜೊತೆ ಕೈಜೋಡಿಸಿ ಯುವಕರ ತಂಡ ಮಾಡಿದ ಈ ಕೆಲಸ ಇತರರಿಗೂ ಮಾದರಿಯಾಗಿದೆ," ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀನಿವಾಸ ನಾಯ್ಕ ಮಾತನಾಡಿ, "ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ನಿಲ್ದಾಣಕ್ಕೆ ಹತ್ತಿರವಿರುವ ಈ ಪ್ರದೇಶದಲ್ಲಿ ರಾತ್ರಿ ವೇಳೆ ಅಪರಿಚಿತರ ಸಂಚಾರ, ಕಳ್ಳತನ ಹಾಗೂ ಗೋ ಕಳ್ಳತನದಂತಹ ಕೃತ್ಯಗಳ ಮೇಲೆ ನಿಗಾ ಇಡಲು ಸಿಸಿಟಿವಿ ಸಹಾಯವಾಗಲಿದೆ. ಸಮಾಜಮುಖಿ ಕೆಲಸ ಮಾಡಲು ಹಣಕ್ಕಿಂತ ಊರಿನ ಬಗೆಗಿನ ಕಾಳಜಿ ಮುಖ್ಯ ಎಂಬುದನ್ನು ಈ ಯುವಕರ ತಂಡ ಸಾಬೀತುಪಡಿಸಿದೆ," ಎಂದು ಬಣ್ಣಿಸಿದರು.
ಪೋಲಿಸರ ಉಸ್ತುವಾರಿಗೆ ಸಿಸಿಟಿವಿ:ಅಳವಡಿಸಲಾದ ಕ್ಯಾಮೆರಾಗಳ ಸಂಪೂರ್ಣ ಉಸ್ತುವಾರಿ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪೋಲಿಸ್ ಇಲಾಖೆಗೆ ವಹಿಸಲಾಗಿದ್ದು, ಸಿಸಿಟಿವಿ ನಿಯಂತ್ರಣ ವ್ಯವಸ್ಥೆಯನ್ನು ಪಿಎಸೈ ನವೀನ ನಾಯ್ಕ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಫ್ರೆಂಡ್ಸ್ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಉಪಾಧ್ಯಕ್ಷ ಮಾತೇಶ ನಾಯ್ಕ, ಕಾರ್ಯದರ್ಶಿ ಮೋಹನ ನಾಯ್ಕ, ಸದಸ್ಯರಾದ ಕುಮಾರ್ ನಾಯ್ಕ, ಶಿವರಾಮ ನಾಯ್ಕ, ಧನುಷ ನಾಯ್ಕ ಹಾಗೂ ಊರಿನ ಪ್ರಮುಖರಾದ ಗಣೇಶ ನಾಯ್ಕ, ಶೇಷಗಿರಿ ನಾಯ್ಕ, ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ ಮತ್ತಿತರರು ಭಾಗವಹಿಸಿದ್ದರು.