ಭಟ್ಕಳ: ಭಟ್ಕಳ ಮುಸ್ಲಿಂ ಯೂತ್ ಫೆಡರೇಷನ್‌ (BMYF) ವತಿಯಿಂದ ಇಲ್ಲಿನ ಅಬು ಫೈಸಲ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಆಯೋಜಿಸಿದ್ದ BMYF ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್–2 ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಟೂರ್ನಿಯಲ್ಲಿ BMYF ಭಟ್ಕಳ ಆಟಗಾರರ ವಿಭಾಗ, 40 ವರ್ಷ ಮೇಲ್ಪಟ್ಟವರ ವಿಭಾಗ, ಅಂಡರ್–15 ಓಪನ್ ಹಾಗೂ ಓಪನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿವಿಧ ವಯೋಮಾನದ ಆಟಗಾರರು ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದರು.

BMYF ಭಟ್ಕಳ ಆಟಗಾರರ ವಿಭಾಗದಲ್ಲಿ ನೊಹೈಲ್ ಮತ್ತು ಅಲಿ ಇರ್ಷಾದ್ ಸಿದ್ದೀಕಾ ಪ್ರಥಮ ಸ್ಥಾನ ಪಡೆದರೆ, ಇಮ್ರಾನ್ ಮತ್ತು ಸದೀದ್ ರನ್ನರ್‌ಅಪ್ ಆದರು.

40 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ದಾಂಡೇಲಿ–ಹಳಿಯಾಳದ ನಾಗೇಂದ್ರ ನಾಯಕ್ ಮತ್ತು ಅವಿನಾಶ್ ಚಾಂಪಿಯನ್‌ ಶಿಪ್ ಗೆದ್ದರು. ಹೊನ್ನಾವರದ ಆರ್.ಕೆ. ಮೇಸ್ತಾ ಮತ್ತು ಶ್ಯಾಮ್ ರನ್ನರ್‌ಅಪ್ ಆದರು.

ಅಂಡರ್–15 ಓಪನ್ ವಿಭಾಗದಲ್ಲಿ ಭಟ್ಕಳದ ಅಲಿ ಸಿದ್ದೀಕಾ ಮತ್ತು ಮಂಗಳೂರಿನ ಹಮ್ದಾನ್ ಪ್ರಥಮ ಸ್ಥಾನ ಪಡೆದರು. ಅಂಕೋಲಾದ ಜುನೈದ್ ಮತ್ತು ಶಿರಸಿಯ ದರ್ಶನ್ ರನ್ನರ್‌ಅಪ್ ಸ್ಥಾನ ಪಡೆದರು.

ಓಪನ್ ವಿಭಾಗದಲ್ಲಿ ಭಟ್ಕಳದ ನಿಖಿಲ್ ಶಾನಭಾಗ ಮತ್ತು ಅಂಕೋಲಾದ ಆದರ್ಶ ಪ್ರಭು ವಿಜಯಿಗಳಾದರೆ, ಭಟ್ಕಳದ ಅಸಾಮ್ ಶಾಬಂದ್ರಿ ಮತ್ತು ಅಂಕೋಲಾದ ಅಮೋಘ್ ರನ್ನರ್‌ಅಪ್ ಆದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಜ್ಲಿಸ್-ಎ-ಇಸ್ಲಾಹ್-ವ-ತಂಝೀಮ್ ಭಟ್ಕಳದ ಆಂತರಿಕ ಲೆಕ್ಕಪರಿಶೋಧಕ ಬಿಲಾಲ್ ಕಮರಿ, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್‌ ಫೋನ್‌ನ ಅತಿಯಾದ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ BMYF ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಿಲ್ಲಾರೆ, ಸಂಚಾಲಕ ಇಸ್ತಿಯಾಕ್ ರುಕ್ನುದ್ದೀನ್, ಅಂಜುಮನ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಮೋಹನ್ ಮೇಸ್ತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor