ಮಾರುಕೇರಿಯಲ್ಲಿ ಪ್ರಜಾಸೇವೆ ಆಂದೋಲನ: ಮೂಲಸೌಕರ್ಯಕ್ಕೆ ಆಗ್ರಹ
ಭಟ್ಕಳ: ರಸ್ತೆ, ಸಾರಿಗೆ, ಆರೋಗ್ಯ, ಕುಡಿಯುವ ನೀರು, ವಿದ್ಯುತ್, ನೆಟ್‌ವರ್ಕ್ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕೊರತೆ ನಿವಾರಿಸುವಂತೆ ಆಗ್ರಹಿಸಿ ಮಾರುಕೇರಿ ಗ್ರಾಮಸ್ಥರು ‘ಪ್ರಜಾಸೇವೆ ಆಂದೋಲನ’ ದಲ್ಲಿ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
ಸೂಸಗಡಿ ಹೋಬಳಿಯ ಮಾರುಕೇರಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸಹಾಯಕ ಆಯುಕ್ತ ಜಿ. ಮಹೇಶ್ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಜಲಜೀವನ ಮಿಷನ್ ಕಾಮಗಾರಿಗಾಗಿ ಅಗೆದು ಬಿಟ್ಟಿರುವ ರಸ್ತೆಗಳ ದುರಸ್ತಿ, ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರ ಹಾಗೂ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಮಾರುಕೇರಿ ಭಾಗಕ್ಕೆ ಸಮರ್ಪಕ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕನಿಷ್ಠ ಗಂಟೆಗೊಂದು ಬಸ್ ಓಡಿಸುವಂತೆಯೂ ಒತ್ತಾಯಿಸಿದರು.
ಬಂದ್ ಆಗಿರುವ ಅತ್ರೋಳಿ ಶಾಲೆ ಪುನರಾರಂಭ, ಕೋಟಖಂಡ ಶಾಲೆಗೆ ಶಿಕ್ಷಕರ ನೇಮಕ ಹಾಗೂ ಹೊಸ ಕಟ್ಟಡ ನಿರ್ಮಾಣ, ಕಿತ್ರೆ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಬೇಡಿಕೆಗಳೂ ಕೇಳಿಬಂದವು.
ಕೋಣಾರ ಆಸ್ಪತ್ರೆಯಲ್ಲಿ ವೈದ್ಯರ ನೇಮಕ, ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಸೇವೆ, ಆಯುಷ್ಮಾನ್ ಕೇಂದ್ರಗಳಲ್ಲಿ ಔಷಧ ಲಭ್ಯತೆ ಹಾಗೂ ಆಶಾ ಮತ್ತು ಆರೋಗ್ಯ ಕಾರ್ಯಕರ್ತರ ಕೊರತೆ ನಿವಾರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಮರ್ಪಕ ಔಷಧ ದೊರೆಯದಿರುವುದು ಮತ್ತು ಪಶುವೈದ್ಯರ ಕೊರತೆಯ ಬಗ್ಗೆಯೂ ಗಮನ ಸೆಳೆಯಲಾಯಿತು.
ಗೊಂಡ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಪಡೆಯಲು ವರ್ಷಗಳಿಂದ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಕಾಡುಪ್ರಾಣಿಗಳ ಹಾವಳಿ ತಡೆ, ರುದ್ರಭೂಮಿಗೆ ಜಾಗ, ಪಿಂಚಣಿ ಹಾಗೂ ಬಿಪಿಎಲ್ ಪಡಿತರ ಚೀಟಿ ಸಮಸ್ಯೆಗಳ ಪರಿಹಾರಕ್ಕೂ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದ ಮಾಹಿತಿ ತಡವಾಗಿ ನೀಡಿದ್ದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಚುನಾವಣಾ ನೀತಿ ಸಂಹಿತೆಯಿಂದ ಮಾಹಿತಿ ರವಾನೆಯಲ್ಲಿ ವಿಳಂಬವಾಗಿದೆ ಎಂದು ಸಹಾಯಕ ಆಯುಕ್ತರು ಸ್ಪಷ್ಟಪಡಿಸಿದರು. ಸಚಿವರ ಸಮ್ಮುಖದಲ್ಲಿ ಶೀಘ್ರದಲ್ಲೇ ಮತ್ತೊಂದು ಪ್ರಜಾಸೇವೆ ಆಂದೋಲನ ನಡೆಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಪ್ರವೀಣ್ ಕಾರಂಡೆ, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಬಿ., ಬಿಇಒ ವೆಂಕಟೇಶ ನಾಯಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.