ಭಟ್ಕಳ:  ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ದಿನದ ಹೆಣ್ಣು ಮಗು ಮೃತಪಟ್ಟಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಮಗುವಿನ ಸಾವಿಗೆ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆಸ್ಪತ್ರೆಯಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ಮಾಹಿತಿ ತಿಳಿದು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮಗುವಿನ ಸಾವಿನ ಸಂದರ್ಭದ ಕುರಿತು ಮಾಹಿತಿ ಸಂಗ್ರಹಿಸಿದರು.

ಮಗುವಿನ ತಾಯಿ ಹೇಮಾ ಅವರ ಪ್ರಕಾರ, ಮೂರು ದಿನಗಳ ಹಿಂದೆ ಅವರು ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳ ವರದಿಗಳು ಸಹಜವಾಗಿದ್ದವು. ಆದರೆ ಬುಧವಾರ ಬೆಳಿಗ್ಗೆ ಮಗುವಿನ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಚಿಕಿತ್ಸೆಗಾಗಿ ವೈದ್ಯರು ಹಾಗೂ ದಾದಿಯರು ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ಸ್ಥಳಾಂತರಿಸಿದ್ದರು. ಸುಮಾರು ಅರ್ಧ ಗಂಟೆಯ ಬಳಿಕ ಮಗು ಮೃತಪಟ್ಟಿರುವುದಾಗಿ ಕುಟುಂಬದವರಿಗೆ ತಿಳಿಸಲಾಯಿತು. ಹೇಮಾ ಅವರಿಗೆ ಇದು ಎರಡನೇ ಹೆರಿಗೆಯಾಗಿದ್ದು, ಎರಡು ವರ್ಷದ ಮತ್ತೊಂದು ಹೆಣ್ಣು ಮಗುವಿದೆ.

ಮಗುವಿನ ತಂದೆ ಸತೀಶ ನಾಯ್ಕ್ ಅವರು ವೈದ್ಯರು ಹಾಗೂ ದಾದಿಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆದರೆ, ಆರೋಗ್ಯ ಕೇಂದ್ರದ ಮೂಲಗಳ ಪ್ರಕಾರ, ಬುಧವಾರ ಬೆಳಿಗ್ಗೆ ತಾಯಿ ಮಗುವಿಗೆ ಹಾಲುಣಿಸಿದ್ದರು. ಈ ಸಂದರ್ಭದಲ್ಲಿ ಹಾಲು ಗಂಟಲಿನಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಬೆಳಿಗ್ಗೆ ಸುಮಾರು 11.30ರ ವೇಳೆಗೆ ಮಗುವಿನ ಆರೋಗ್ಯ ಹದಗೆಟ್ಟಿದ್ದು, ತಕ್ಷಣ ಎನ್‌ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಉಳಿಸಲು ಪ್ರಯತ್ನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.

ಪೊಲೀಸರು ಮಗುವಿನ ಪೋಷಕರು ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದು, ಆರೋಗ್ಯ ಕೇಂದ್ರದ ವೈದ್ಯರನ್ನೂ ವಿಚಾರಿಸಿದರು. ಲಿಖಿತ ದೂರು ಸಲ್ಲಿಕೆಯಾದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರುನಾಳ್, ಪಿಎಸ್‌ಐ ಮಲ್ಲಿಕಾರ್ಜುನ ಕುರಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor