ಭಟ್ಕಳ ಕ್ಷೇತ್ರದ ಮತದಾರರ ಪಟ್ಟಿಯಿಂದ 13 ಸಾವಿರ ಹೆಸರು ಕಡಿತ
ಭಟ್ಕಳ: ಭಾರತ ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಭಟ್ಕಳ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ ಹಿಂದಿನ ಪಟ್ಟಿಗೆ ಹೋಲಿಸಿದರೆ ಸುಮಾರು 13 ಸಾವಿರ ಮತದಾರರ ಸಂಖ್ಯೆ ಕಡಿಮೆಯಾಗಿದೆ.
ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪರಿಷ್ಕರಣೆಗೂ ಮುನ್ನ ಭಟ್ಕಳ ಕ್ಷೇತ್ರದಲ್ಲಿ ಸುಮಾರು 2.31 ಲಕ್ಷ ಮತದಾರರಿದ್ದರು. ಇದೀಗ ಈ ಸಂಖ್ಯೆ ಸುಮಾರು 2.18 ಲಕ್ಷಕ್ಕೆ ಇಳಿದಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಮೂನೆ–6ರ ಮೂಲಕ ಸುಮಾರು 5,700 ಹೊಸ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ. ಮತ್ತೊಂದೆಡೆ, ವಿವಿಧ ಕಾರಣಗಳಿಂದ ಸುಮಾರು 19 ಸಾವಿರದಿಂದ 20 ಸಾವಿರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಆಗಿರುವ ಈ ಬದಲಾವಣೆ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮತದಾರರು ಅಂತಿಮ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಸೇರಿದಂತೆ ಇತರ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಚುನಾವಣಾ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಅಥವಾ ವಿವರಗಳಲ್ಲಿ ತಪ್ಪುಗಳಿದ್ದರೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.