ಭಟ್ಕಳದಲ್ಲಿ 50ಕ್ಕೂ ಹೆಚ್ಚು ಬಾವಿ ನೀರು ಕಲುಷಿತ; ಸಾಂಕ್ರಾಮಿಕ ರೋಗದ ಭೀತಿ
ಭಟ್ಕಳ: ಪಟ್ಟಣದ ವಾರ್ಡ್ 15ರಲ್ಲಿ ಯುಜಿಡಿ (ಭೂಗತ ಒಳಚರಂಡಿ) ವ್ಯವಸ್ಥೆಯ ದೋಷದಿಂದ ಸಾರ್ವಜನಿಕರು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 50ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತಗೊಂಡಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಹೆಚ್ಚಾಗಿದೆ.
ಸ್ಥಳೀಯರ ಪ್ರಕಾರ, ಕಳೆದ ಒಂದು ತಿಂಗಳಿನಿಂದ ಯುಜಿಡಿ ಚೇಂಬರ್ ಸೋರಿಕೆಯಿಂದ ಮಲಿನ ನೀರು ರಸ್ತೆಯ ಗಟಾರಗಳಲ್ಲಿ ಹರಿಯುತ್ತಿದ್ದು, ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದರೂ ಸಂಬಂಧಪಟ್ಟ ಇಲಾಖೆಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇದರಿಂದ ರಘುನಾಥ ರಸ್ತೆ, ಮಣ್ಕುಳಿ ಹಾಗೂ ಪುಷ್ಪಾಂಜಲಿ ಥಿಯೇಟರ್ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸಮನ್ವಯದ ಕೊರತೆಯ ಆರೋಪ: ಈ ಸಮಸ್ಯೆಗೆ ಸಂಬಂಧಿಸಿದಂತೆ ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತಿರುವ ಐಆರ್‌ಬಿ ಸಂಸ್ಥೆ ಪರಸ್ಪರ ಹೊಣೆಗಾರಿಕೆ ತಳ್ಳಿಹಾಕುತ್ತಿರುವುದಾಗಿ ಸಾರ್ವಜನಿ ಕರು ದೂರಿದ್ದಾರೆ.
ದೂರು ನೀಡಿದಾಗ ಪುರಸಭೆ ಅಧಿಕಾರಿಗಳು, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ; ಐಆರ್‌ಬಿ ಸಂಪರ್ಕಿಸಿ’ ಎಂದು ತಿಳಿಸುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಐಆರ್‌ಬಿ ಅಧಿಕಾರಿಗಳು, ‘ಹೊಸ ಲೈನ್‌ಗೆ ಸಂಪರ್ಕ ಕಲ್ಪಿಸುವ ಮುನ್ನ ಹಳೆಯ ಯುಜಿಡಿ ಸಂಪರ್ಕವನ್ನು ಬಂದ್ ಮಾಡಿರುವುದು ಸಮಸ್ಯೆಗೆ ಕಾರಣ’ ಎಂದು ಹೇಳುತ್ತಿರುವುದಾಗಿ ನಿವಾಸಿಗಳು ತಿಳಿಸಿದ್ದಾರೆ.
ಇದರಿಂದ ಸಮಸ್ಯೆ ಪರಿಹಾರವಾಗದೇ ಜನರು ಮಾತ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರ್ವಾಸನೆಯಿಂದ ಜನಜೀವನ ಅಸ್ತವ್ಯಸ್ತ: ಮಲಿನ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದೆ. ಈ ಮಾರ್ಗದ ಮೂಲಕ ರೈಲು ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಹಾಗೂ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾವಿಗಳ ನೀರು ಬಳಕೆಗೆ ಯೋಗ್ಯವಿಲ್ಲದಂತಾ ಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ.
ಮಳೆಗಾಲದಲ್ಲಿ ಬಾವಿಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವುದು ಕಷ್ಟಕರವಾಗಿರುವುದರಿಂದ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಹೆದ್ದಾರಿ ತಡೆ ಎಚ್ಚರಿಕೆ: ಸಮಸ್ಯೆ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಯುಜಿಡಿ ಚೇಂಬರ್ ದುರಸ್ತಿಪಡಿಸಿ, ಮಲಿನ ನೀರಿನ ಹರಿವು ತಕ್ಷಣ ನಿಲ್ಲಿಸ ಬೇಕು ಹಾಗೂ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದಿನ ಎರಡು ದಿನಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಜೂನ್ 15ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಆರೋಗ್ಯಕ್ಕೆ ಸವಾಲು : ಯುಜಿಡಿ ವ್ಯವಸ್ಥೆಯ ದೋಷ, ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಸಮಸ್ಯೆ ಪರಿಹಾರದಲ್ಲಿ ಕಂಡುಬರುತ್ತಿರುವ ವಿಳಂಬ ಸಾರ್ವಜನಿಕ ಆರೋಗ್ಯದ ಮೇಲೆಯೇ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಮಳೆಗಾಲದಲ್ಲಿ ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಸೇರಿದಂತೆ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.