ಜೂ.15ರೊಳಗೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ: ತಂಝೀಮ್ ಮನವಿ
ಭಟ್ಕಳ: ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ನವೀಕರಿಸಲು ಹಾಗೂ ಯಾವುದೇ ತೊಂದರೆಗಳನ್ನು ತಪ್ಪಿಸಲು ಎಲ್ಲ ಅರ್ಹ ಮತದಾರರು ಜೂನ್ 15ರೊಳಗೆ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಮನವಿ ಮಾಡಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಭಾರತೀಯ ಚುನಾವಣಾ ಆಯೋಗ ಕೈಗೊಂಡಿದ್ದು, ದತ್ತಾಂಶ ಸಂಗ್ರಹ ಮತ್ತು ಪರಿಶೀಲನೆಗಾಗಿ ಡಿಜಿಟಲ್ ಮತದಾರರ ಪಟ್ಟಿ (ಇ-ರೋಲ್)ಯನ್ನು ಜೂನ್ 16ರಂದು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಿಂದ ಪ್ರಸ್ತುತ ಮತದಾರರ ದಾಖಲೆಗಳನ್ನು ಹಿಂದಿನ ಮತದಾರರ ಪಟ್ಟಿ ಯೊಂದಿಗೆ ಜೋಡಿಸಲು ಸಾಧ್ಯವಾಗಲಿದ್ದು, ನಕಲಿ ನೋಂದಣಿ, ಸ್ಥಳಾಂತರಗೊಂಡಿರುವ ಅಥವಾ ತಪ್ಪಾಗಿ ದಾಖಲಾಗಿರುವ ಮತದಾರರ ವಿವರಗಳನ್ನು ಗುರುತಿಸಿ ಸರಿಪಡಿಸಲು ಅನುಕೂಲವಾಗಲಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತಂಝೀಮ್ ವತಿಯಿಂದ ಮೂರು ದಿನಗಳ ‘ಮತದಾರರ ಸಹಾಯ ಶಿಬಿರ’ವನ್ನು ಆಯೋಜಿಸಲಾಗಿದೆ.
ಜೂನ್ 14, 15 ಮತ್ತು 16ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ನವಾಯತ್ ಕಾಲೊನಿಯ ರಾಬಿತಾ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಮತದಾರರ ಗುರುತಿನ ಚೀಟಿಯಲ್ಲಿನ ತಿದ್ದುಪಡಿ, ಹೊಸ ಮತದಾರರ ನೋಂದಣಿ ಹಾಗೂ ಮತದಾರರ ಮ್ಯಾಪಿಂಗ್ ಕುರಿತ ಮಾಹಿತಿ ಮತ್ತು ನೆರವು ಒದಗಿಸಲಾಗುವುದು. ಹೊಸ ಮತದಾರರ ನೋಂದಣಿಗಾಗಿ ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ಸಂಬಂಧಿಕರ ಮತದಾರರ ಗುರುತಿನ ಚೀಟಿ ಸಲ್ಲಿಸಬೇಕಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯಂತೆ ಜೂನ್ 15 ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನವಾಗಿದ್ದು, ಜೂನ್ 30ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ (ಬಿಎಲ್‌ಒ) ಮನೆ ಮನೆಗೆ ತೆರಳಿ ಪರಿಶೀಲನೆ ಆರಂಭವಾಗಲಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರಿಗೆ ಸಂಬಂಧಿಸಿದ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ತಂಝೀಮ್ ಪ್ರಕಟಣೆಯಲ್ಲಿ ಕೋರಿದೆ.