ಅನಧಿಕೃತವಾಗಿ ಮಾರ್ಪಡಿಸಿದ ಸೈಲೆನ್ಸರ್‌ ಅಳವಡಿಕೆಗೆ ಕಡಿವಾಣ: ಭಟ್ಕಳದಲ್ಲಿ ಶೋರೂಂ, ಗ್ಯಾರೇಜ್‌ಗಳ ಪರಿಶೀಲನೆ

Update: 2026-08-03 08:30 IST

ಭಟ್ಕಳ: ದ್ವಿಚಕ್ರ ವಾಹನಗಳಿಗೆ ಅನಧಿಕೃತವಾಗಿ ಮಾರ್ಪಡಿಸಿದ (modified)ಸೈಲೆನ್ಸರ್‌ಗಳನ್ನು ಅಳವಡಿಸುವುದು ಹಾಗೂ ಅನಧಿಕೃತ ಮಾರ್ಪಾಡುಗಳನ್ನು ತಡೆಯುವ ಉದ್ದೇಶದಿಂದ ಭಟ್ಕಳ ಪಟ್ಟಣ ಪೊಲೀಸರು ಶನಿವಾರ ಪಟ್ಟಣ ವ್ಯಾಪ್ತಿಯ ದ್ವಿಚಕ್ರ ವಾಹನಗಳ ಶೋರೂಂಗಳು, ಸರ್ವಿಸ್ ಸೆಂಟರ್‌ಗಳು ಮತ್ತು ಗ್ಯಾರೇಜ್‌ಗಳಲ್ಲಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ನವೀನ್ ನಾಯ್ಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಮಿತಿಮೀರಿದ ಶಬ್ದ ಉಂಟುಮಾಡುವ ಮಾರ್ಪಡಿಸಿದ ಸೈಲೆನ್ಸರ್‌ಗಳ ಬಳಕೆಗೆ ತಡೆಹಾಕುವುದು ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು.

ಪರಿಶೀಲನೆ ವೇಳೆ ಶೋರೂಂ ಮಾಲೀಕರು, ಗ್ಯಾರೇಜ್‌ ನಿರ್ವಾಹಕರು ಹಾಗೂ ಸರ್ವಿಸ್ ಸೆಂಟರ್ ಸಿಬ್ಬಂದಿಗೆ ವಾಹನಗಳ ಮೂಲ ಸೈಲೆನ್ಸರ್‌ಗಳನ್ನು ತೆಗೆದು ಅನಧಿಕೃತವಾಗಿ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅಳವಡಿಸದಂತೆ ಸೂಚನೆ ನೀಡಲಾಯಿತು. ಅಲ್ಲದೆ, ವಾಹನಗಳಲ್ಲಿ ಯಾವುದೇ ರೀತಿಯ ಅನಧಿಕೃತ ಬದಲಾವಣೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದರು.

ಇಂತಹ ಮಾರ್ಪಾಡುಗಳು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ಮಾರ್ಪಡಿಸಿದ ಸೈಲೆನ್ಸರ್‌ ಅಳವಡಿಕೆ ಅಥವಾ ಇತರ ಅನಧಿಕೃತ ಬದಲಾವಣೆಗಳಲ್ಲಿ ತೊಡಗಿರುವ ಶೋರೂಂಗಳು, ಗ್ಯಾರೇಜ್‌ಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News