ಮುರಿನ್ ಕಟ್ಟೆ ವಿಚಾರದಲ್ಲಿ ಪ್ರಚೋದನಕಾರಿ ಪೋಸ್ಟ್; ಫೇಸ್ಬುಕ್ ಖಾತೆದಾರನ ಗುರುತು ಪತ್ತೆ

Update: 2026-07-31 21:20 IST

ಭಟ್ಕಳ: ಬೇರೆಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ರೀತಿಯ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ ಆರೋಪದಡಿ ಭಟ್ಕಳ ತಾಲ್ಲೂಕಿನ ಉತ್ತರಕೊಪ್ಪ ಗ್ರಾಮದ 28 ವರ್ಷದ ಯುವಕನನ್ನು ಪೊಲೀಸರು ಗುರುತಿಸಿದ್ದು, ತನಿಖೆಯ ಭಾಗವಾಗಿ ಆತನ ಮೊಬೈಲ್  ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯನ್ನು ಉತ್ತರಕೊಪ್ಪ ನಿವಾಸಿ ಹಾಗೂ ವೃತ್ತಿಯಲ್ಲಿ ಶಿಲ್ಪಿಯಾಗಿರುವ ಈಶ್ವರ ಕೃಷ್ಣ ನಾಯ್ಕ (28) ಎಂದು ಗುರುತಿಸಲಾಗಿದೆ.

ಆರೋಪಿ 'ರೋಹಿತ್ ಶೆಟ್ಟಿ' ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು, ಭಟ್ಕಳದ ಮುರೀನ್‌ಕಟ್ಟೆ ವಿವಾದವನ್ನು ಆಧರಿಸಿ ಮತ್ತೊಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಬರಹಗಳು ಹಾಗೂ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಯಮಿತ ನಿಗಾ ವೇಳೆ ಈ ಖಾತೆ ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಸೈಬರ್ ಫೊರೆನ್ಸಿಕ್ ತಂತ್ರಜ್ಞಾನದ ನೆರವಿನಿಂದ ಖಾತೆಯ ಮೂಲವನ್ನು ಪತ್ತೆಹಚ್ಚಿದ ಪೊಲೀಸರು, ಉತ್ತರಕೊಪ್ಪದಲ್ಲಿ ಆರೋಪಿಯನ್ನು ಗುರುತಿಸಿ ಆತನ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಮೊಬೈಲ್‌ನಲ್ಲಿರುವ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News