×
Ad

ಭಟ್ಕಳ ಮುರಿನಕಟ್ಟೆ ವಿವಾದ | ಪೊಲೀಸ್ ಇನ್ ಸ್ಪೆಕ್ಟರ್ ಕರ್ತವ್ಯಕ್ಕೆ ಅಡ್ಡಿ ಆರೋಪ: 22 ಮಂದಿಯ ವಿರುದ್ಧ FIR

Update: 2026-05-26 14:58 IST

ಭಟ್ಕಳ: ನಗರದ ಮುರಿನಕಟ್ಟೆ ಪ್ರದೇಶದಲ್ಲಿ ಅಕ್ರಮವಾಗಿ ಗುಂಪು ಸೇರಿ, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಗೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ 22 ಹೆಸರಿತ ಆರೋಪಿಗಳು ಹಾಗೂ ಇತರರ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 24ರಂದು ರಾತ್ರಿ 8 ಗಂಟೆಯ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಮುರಿನಕಟ್ಟೆ ಬಳಿ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಭಟ್ಕಳ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ದಿವಾಕರ್ ಪಿ.ಎಂ. ನೀಡಿರುವ ದೂರಿನಂತೆ ಎಫ್ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ?

ದೂರಿನ ಪ್ರಕಾರ, ಮೇ 24ರಂದು ರಾತ್ರಿ 8 ಗಂಟೆಯ ವೇಳೆ ಮುರಿನಕಟ್ಟೆ ಬಳಿ ಸುಮಾರು 50 ಮಂದಿ ಅಕ್ರಮವಾಗಿ ಗುಂಪು ಸೇರಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಇನ್ ಸ್ಪೆಕ್ಟರ್ ದಿವಾಕರ್ ರೊಂದಿಗೆ ಕೆಲವರು ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇನ್ ಸ್ಪೆಕ್ಟರ್ ರನ್ನು ತಳ್ಳಿ-ದೂಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಘಟನೆಯಲ್ಲಿ ತನ್ನ ಕಾಲಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಇನ್ ಸ್ಪೆಕ್ಟರ್ ದಿವಾಕರ್ ಉಲ್ಲೇಖಿಸಿದ್ದಾರೆ.

ಆರೋಪಿಗಳ ವಿವರ

ಪ್ರಕರಣದಲ್ಲಿ ತೈಮೂರ್ ಗವಾಯಿ, ಸುಹೇಲ್ ಕದ್ದಾರಿ, ನಹೀಮ್ ಕಾಸಿಂಜಿ, ಸಲಾಮ್ ಚಾಮುಂಡಿ, ಅಬ್ದುಲ್ ಅನನ್, ಬಾಸಿದ್ ಮೌಲಿನ್, ಜುಲ್ಕಿಫ್ ಹಸನ್ ತಹಾ ರುಕ್ನುದ್ದೀನ್, ಆರಿಫ್ ಜಬಾಲಿ, ಅಬ್ದುಲ್ ಅಲೀಮ್ ಜಬಾಲಿ, ಜಮ್ಮೇರ್, ಮರ್ವಾನ್ ಅಜೈಬ್, ನೌಫಿಲ್, ಅಯ್ಯನ್ ದಾಮುದಿ, ನಾಸಿರ್, ಜಾವೇದ್ ಮುಕ್ರಿ, ಫಈಝ್ ಮಜಾರ್, ಅರ್ಸಲಾನ್ ಮೋಟಿಯ, ಶಾರೀಮ್ ಹಸಿಮ್, ಮುಂತಾಜೀನ್, ಸಲಾಮ್, ಅಹಮದ್ ಪೇಶಮಾಮ್ ಹಾಗೂ ತಮಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 189(2), 191(2), 132, 121(1), 351(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News