ಗಂಡಬೇರುಂಡ ಕಬಡ್ಡಿ ಪಂದ್ಯಾವಳಿಗೆ ಚಾಲನೆ: ಮೊದಲ ಪಂದ್ಯದಲ್ಲಿ ಶಿವಮೊಗ್ಗಕ್ಕೆ ಗೆಲುವು
ಭಟ್ಕಳ: ಭಟ್ಕಳದ ವೆಂಕಟಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಮೈದಾನದಲ್ಲಿ ಶುಕ್ರವಾರ ಮೂರು ದಿನಗಳ ರಾಜ್ಯಮಟ್ಟದ ಗಂಡಬೇರುಂಡ ಕಬಡ್ಡಿ ಪಂದ್ಯಾವಳಿ ಆರಂಭಗೊಂಡಿತು. ರಾಜ್ಯದ 10 ಜಿಲ್ಲೆಗಳ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.
ಮೊದಲ ಪಂದ್ಯದಲ್ಲಿ ಶಿವಮೊಗ್ಗ ತಂಡವು ಚಿಕ್ಕಮಗಳೂರು ವಿರುದ್ಧ ಕೊನೆಯ ಕ್ಷಣದವರೆಗೂ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕೇವಲ ಒಂದು ಅಂಕದ ಅಂತರದಿಂದ ರೋಚಕ ಗೆಲುವು ದಾಖಲಿಸಿತು. ನಿರ್ಣಾಯಕ ಹಂತದಲ್ಲಿ ಚಿಕ್ಕಮಗಳೂರಿನ ರೈಡರ್ನನ್ನು ಹಿಡಿಯುವ ಮೂಲಕ ಶಿವಮೊಗ್ಗ ತಂಡ ಗೆಲುವಿನ ನಗೆ ಬೀರಿತು.
ವರದಿ ಸಿದ್ಧವಾಗುವ ವೇಳೆಗೆ ನಾಲ್ಕು ಪಂದ್ಯಗಳು ಪೂರ್ಣಗೊಂಡಿದ್ದವು. ಎರಡನೇ ಪಂದ್ಯದಲ್ಲಿ ಹಾವೇರಿ ತಂಡ ವಿಜಯನಗರವನ್ನು, ಮೂರನೇ ಪಂದ್ಯದಲ್ಲಿ ಬಳ್ಳಾರಿ ತಂಡ ಚಿತ್ರದುರ್ಗವನ್ನು ಸೋಲಿಸಿತು. ನಾಲ್ಕನೇ ಪಂದ್ಯದಲ್ಲಿ ಉಡುಪಿ ತಂಡ ದಾವಣಗೆರೆ ವಿರುದ್ಧ ಸುಲಭ ಜಯ ಸಾಧಿಸಿತು.
ಶುಕ್ರವಾರದ ಉಳಿದ ಪಂದ್ಯಗಳಲ್ಲಿ ದಕ್ಷಿಣ ಕನ್ನಡ–ಶಿವಮೊಗ್ಗ, ಉತ್ತರ ಕನ್ನಡ–ಹಾವೇರಿ, ಚಿಕ್ಕಮಗಳೂರು–ಚಿತ್ರದುರ್ಗ, ವಿಜಯನಗರ–ಉಡುಪಿ, ದಕ್ಷಿಣ ಕನ್ನಡ–ಬಳ್ಳಾರಿ ಹಾಗೂ ಉತ್ತರ ಕನ್ನಡ–ದಾವಣಗೆರೆ ತಂಡಗಳು ಸೆಣಸಲಿವೆ.
ಶುಕ್ರವಾರ ರಾತ್ರಿ 8.30ಕ್ಕೆ ಪಂದ್ಯಾವಳಿಯ ಔಪಚಾರಿಕ ಉದ್ಘಾಟನಾ ಸಮಾರಂಭ ನಿಗದಿಯಾಗಿದ್ದು, ನವೆಂಬರ್ 29ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ಟೂರ್ನಿ ಮುಕ್ತಾಯಗೊಳ್ಳಲಿದೆ.