ಪ್ರಜಾಸೇವೆ ಮೂಲಕ ಜನರ ಮನೆಬಾಗಿಲಿಗೆ ಆಡಳಿತ : ಸಚಿವ ಕೆ.ಎಸ್.ಬಸವಂತಪ್ಪ
ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ
ವಿಜಯನಗರ (ಹೊಸಪೇಟೆ) : ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಿ, ಆಡಳಿತವನ್ನೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಇಲಾಖೆಯನ್ನು ಸ್ಥಾಪಿಸಿ ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಹರಪನಹಳ್ಳಿ ತಾಲೂಕಿನ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಸೇವೆ ಇಲಾಖೆಯಡಿ ನೋಂದಣಿಯಾಗುವ ಪ್ರತಿಯೊಂದು ಅಹವಾಲನ್ನೂ ನಿಯಮಾನುಸಾರ ಪರಿಶೀಲಿಸಿ ಸಕಾಲದಲ್ಲಿ ಇತ್ಯರ್ಥಪಡಿಸಬೇಕು. ಸ್ಥಳದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾನೂನು ತೊಡಕುಗಳು ಅಥವಾ ದಾಖಲೆಗಳ ಕೊರತೆ ಇದ್ದರೆ ಸಾರ್ವಜನಿಕರಿಗೆ ಸೂಕ್ತ ಸಮಯ ನೀಡಿ ಸಮಸ್ಯೆ ಪರಿಹರಿಸಬೇಕು. ತಕ್ಷಣ ಪರಿಹಾರ ಸಾಧ್ಯವಾಗದ ಪ್ರಕರಣಗಳಲ್ಲಿ ಮುಂದಿನ ಕ್ರಮದ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸದೆ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ವಿವಿಧ ಸಮಸ್ಯೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಿದರು. ಮನೆಯ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕದಿಂದ ತೊಂದರೆಯಾಗುತ್ತಿದೆ ಎಂಬ ಮನವಿಗೆ ಸ್ಥಳ ಪರಿಶೀಲಿಸಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಲ್ ಆಧಾರಿತ ಆಸ್ತಿ ವರ್ಗಾವಣೆ ವಿಳಂಬವಾಗುತ್ತಿರುವ ಕುರಿತು ಸಲ್ಲಿಸಿದ ಮನವಿಗೆ ಕಾನೂನುಬದ್ಧವಾಗಿದ್ದರೆ ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕು, ಇಲ್ಲವಾದರೆ ಕಾರಣ ತಿಳಿಸಿ ಲಿಖಿತ ಉತ್ತರ ನೀಡಬೇಕು ಎಂದು ತಹಶೀಲ್ದಾರ್‌ಗೆ ನಿರ್ದೇಶಿಸಿದರು.
ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷಚೇತನ ಫಲಾನುಭವಿಯೊಬ್ಬರನ್ನು ಆನ್‌ಲೈನ್ ದಾಖಲೆಯಲ್ಲಿ ಮೃತಪಟ್ಟವರು ಎಂದು ನಮೂದಿಸಿದ್ದರಿಂದ ಪಿಂಚಣಿ ಸ್ಥಗಿತಗೊಂಡಿರುವ ಪ್ರಕರಣಕ್ಕೂ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ಜಮೀನಿನ ಹಕ್ಕು ಕುರಿತು ರೈತರು ಸಲ್ಲಿಸಿದ ಅಹವಾಲನ್ನೂ ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಜಾಸೇವೆ ಆಂದೋಲನದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಹರಪನಹಳ್ಳಿ ತಾಲೂಕಿನ 37 ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಪಂಚಾಯಿತಿವಾರು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಜಿಲ್ಲಾಮಟ್ಟದ ವಿವಿಧ ಇಲಾಖೆಗಳು ಮತ್ತು ನಿಗಮ-ಮಂಡಳಿಗಳ ವತಿಯಿಂದಲೂ ಪ್ರತ್ಯೇಕ ಅರ್ಜಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಭಾರತ ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಜಾಗೃತಿ ಮೂಡಿಸಲು ವಿಶೇಷ ಕೌಂಟರ್ ತೆರೆಯಲಾಗಿದ್ದು, ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ಹೆಸರು ತೆಗೆದುಹಾಕುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮ ಸ್ಥಳದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೂ ಆಯೋಜಿಸಲಾಗಿತ್ತು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಉಪವಿಭಾಗಾಧಿಕಾರಿ ಟಿ. ಸುರೇಶ್ ಕುಮಾರ್, ತಹಶೀಲ್ದಾರ್ ಗಿರೀಶ ಬಾಬು, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.